ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್‍ನಲ್ಲಿ ನಡೆದಿದೆ.
ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ ಬರುವಾಗ ವಧು ಕಾಲು ಜಾರಿ ಕೆಳಗೆ ಬಿದಿದ್ದಾಳೆ. ಮಹಿಳೆ ಕೆಳಗೆ ಬಿದ್ದಿದ್ದನ್ನು ನೋಡಿದ ವರ ಆಕೆಗೆ ಸಹಾಯ ಮಾಡುವ ಬದಲು ಸ್ಟುಪಿಡ್ ಎಂದು ಬೈದಿದ್ದಾನೆ.
ವರ ಈ ರೀತಿ ಬೈದಿದ್ದರಿಂದ ವಧು ಮನನೊಂದಿದ್ದಳು. ಅಲ್ಲದೇ ಮದುವೆ ಆದ ಮೂರೇ ನಿಮಿಷಕ್ಕೆ ಅಲ್ಲಿದ್ದ ಜಡ್ಜ್ ಬಳಿ ಹೋಗಿ ತಕ್ಷಣವೇ ತನ್ನ ಪತಿಯಿಂದ ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾಳೆ. ಈಕೆಯ ಮನವಿಯನ್ನು ಸ್ವೀಕರಿಸಿದ ಜಡ್ಜ್ ಇಬ್ಬರಿಗೂ ವಿಚ್ಛೇದನ ಕೊಡಿಸಿದ್ದಾರೆ.
ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಕೆಲವರು ಮಹಿಳೆಗೆ ಪರ ಮಾತನಾಡಿ ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಆಕೆಯ ವಿರುದ್ಧ ಮಾತನಾಡಿದ್ದಾರೆ. ಕೆಲವರು ಮದುವೆ ಆರಂಭದಲ್ಲಿ ಪತಿ ಈ ರೀತಿ ವರ್ತಿಸಿದರೆ, ಆತನಿಂದ ದೂರ ಇರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.