ಮಂಗಳೂರು: ಮನೆಯೊಂದರಲ್ಲಿ ಅರ್ಧ ಸುಟ್ಟು, ಕೊಳೆತ ಸ್ಥಿತಿಯಲ್ಲಿ ವೃದ್ಧ ದಂಪತಿ ಮೃತದೇಹಗಳು ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನ ಚೆಂಬುಗುಡ್ಡೆಯಲ್ಲಿ ಪತ್ತೆಯಾಗಿದೆ.
ಚೆಂಬುಗುಡ್ಡೆ ನಿವಾಸಿಗಳಾದ ಪದ್ಮನಾಭ(78) ಮತ್ತು ವಿಮಲ(65) ಮೃತ ದುರ್ದೈವಿಗಳು. ಮನೆಯಲ್ಲಿ ದಂಪತಿಗಳಿಬ್ಬರೇ ವಾಸವಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ದಂಪತಿಗಳನ್ನು ಅಕ್ಕಪಕ್ಕದ ಮನೆಯವರು ನೋಡಿದ್ದರು. ಆದಾದ ಬಳಿಕ ಇಬ್ಬರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ದಂಪತಿಗಳು ಅಕ್ಕಪಕ್ಕದ ಮನೆಯವರ ಬಳಿ ಹೆಚ್ಚಿನ ಸಲುಗೆ ಹೊಂದಿರಲಿಲ್ಲ. ಹೀಗಾಗಿ ಅವರಿಬ್ಬರು ಮೃತಪಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಂಪತಿ ಸ್ಥಳೀಯರಿಗೆ ಕಾಣದ ಹಿನ್ನೆಲೆ ಅವರ ಮನೆ ಬಳಿ ನೆರೆಹೊರೆ ಮನೆಯವರು ಹೋಗಿ ನೋಡಿದಾಗ ಮೃತಪಟ್ಟಿರುವ ಬಗ್ಗೆ ತಿಳಿದಿದೆ. ಬಳಿಕ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಉಳ್ಳಾಲ ಠಾಣಾ ಪೊಲೀಸರು ಮನೆಯೊಳಗೆ ಹೋದಾಗ ದಂಪತಿ ಮೃತದೇಹಗಳು ಅರ್ಧ ಸುಟ್ಟು, ಕೊಳೆತು ಸ್ಥಿತಿಯಲ್ಲಿ ಪತ್ತೆಯಾಗಿದೆ.
ವೃದ್ಧ ದಂಪತಿ ಹೇಗೆ ಸಾವನ್ನಪ್ಪಿರಬಹುದು ಎಂಬ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಈ ನಿಗೂಢ ಸಾವಿನ ಸುತ್ತ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿದೆ.