ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ.
ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್ ಮನಗಂಡಿದ್ದಾರೆ. ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ದರ್ಶನ್ ಮನೆಯ ಪಕ್ಕದಲ್ಲಿರುವ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ, ತೀವ್ರವಾದ ಪಟಾಕಿ ಸದ್ದಿನಿಂದಾಗಿ ಶ್ರವಣದೋಷ ತೊಂದರೆಗೆ ತುತ್ತಾಗಿದ್ದು, ದರ್ಶನ್ ಗೆ ಪತ್ರ ಬರೆದಿದ್ದಾರೆ. ಇದನ್ನು ನೋಡಿದ್ದೆ ತಡ ದರ್ಶನ್, ಅಭಿಮಾನಿಗಳಿಂದ ಆದ ಅಚಾತುರ್ಯಕ್ಕೆ ಮನ ನೊಂದುಕೊಂಡಿದ್ದಾರೆ.
ಯಾರೂ ಮನೆಯ ಮುಂದೆ ಪಟಾಕಿ ಹೊಡೆದು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ನಾಡಿನ ಹಿರಿಯ ಸಾಹಿತಿಗೆ ಗೌರವ ನೀಡಿದ್ದಾರೆ. ಈಗಾಗಲೇ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ದರ್ಶನ್, ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ಯಾರೂ ತರಬೇಡಿ.
ನಿಮ್ಮ ಊರಿನಲ್ಲಿರುವ ಅನಾಥ ಮಕ್ಕಳ ಶಿಕ್ಷಣಕ್ಕೆ ಆ ಹಣವನ್ನು ಮೀಸಲಾಗಿಡಿ. ಸಂಭ್ರಮಾಚರಣೆ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡಬೇಡಿ ಎಂದು ತಿಳಿಸಿದ್ದಾರೆ.