ಸ್ಯಾಂಡಲ್ ವುಡ್ ದಿಗ್ಗಜ ನಟರಿಬ್ಬರು (ದರ್ಶನ್ ಮತ್ತು ಶಿವಣ್ಣ) ಒಂದೇ ವೇದಿಕೆಯಲ್ಲಿ ಇಂದು ಸಿನಿಮಾ ಒಂದರ ಮೂಹೂರ್ತದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಣ್ಣಾವ್ರ ಸಂಬಂಧಿಕರು ಪಾರ್ವತಮ್ಮ ರಾಜಕುಮಾರ್ ಸಹೋದರಿಯ ಮಗ ಆಗಿರುವ ಧ್ರುವನ್ ಅವರ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ನಡೆದಿದ್ದು ಅಲ್ಲಿ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಡಿ ಬಾಸ್ ದರ್ಶನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡುಗರನ್ನು ಅಚ್ಚರಿ ಪಡುವಂತೆ ಮಾಡಿತು. ಧ್ರುವನ್ ಅವರು ನಟಿಸುವ ಈ ಚಿತ್ರಕ್ಕೆ ಶಿವಣ್ಣ ಕ್ಲಾಪ್ ಮಾಡಿದರೆ ದಚ್ಚು ಕ್ಯಾಮೆರಾ ಆನ್ ಮಾಡಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.
ಆ ಸಂದರ್ಭದಲ್ಲಿ ಶಿವಣ್ಣ ಹಾಗೂ ದರ್ಶನ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಮಾಧ್ಯಮದವರು ಇಬ್ಬರೂ ಒಟ್ಟಿಗೆ ನಟಿಸುವಿರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಇಬ್ಬರಿಗೂ ಹೊಂದಿಕೆ ಆಗುವಂತಹ ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಒಟ್ಟಾಗಿ ನಟಿಸುತ್ತೇವೆ ಎಂದು ಹೇಳಿದರೆ. ದರ್ಶನ್ ಅವರು ನಮ್ಮಿಬ್ಬರನ್ನೂ ಒಟ್ಟಾಗಿ ಸಿನಿಮಾದಲ್ಲಿ ಸರಿ ತೋಗಿಸುವಂತಹ (ಹ್ಯಾಂಡಲ್) ನಿರ್ದೇಶಕರು ಯಾರೂ ಇಲ್ಲ? ಅಂತಹ ನಿರ್ದೇಶಕರು ಸಿಕ್ಕರೆ ಖಂಡಿತಾ ಒಟ್ಟಾಗಿ ಸಿನಿಮಾ ಮಾಡುತ್ತೇವೆ ಎಂದರು. ಮಾದ್ಯಮದವರ ಮತ್ತೊಂದು ಪ್ರಶ್ನೆ ಒಟ್ಟಾಗಿ ನಟಿಸಿದರೆ ತಾವಿಬ್ಬರೂ ಲಾಂಗ್ ಅನ್ನು ಯಾರು ಹಿಡಿಯುತ್ತೀರಿ ಎಂದು ಕೇಳಿದರು.
ತಕ್ಷಣ ಪ್ರತಿಕ್ರಿಯೆ ನೀಡಿದ ದಚ್ಚು “ಲಾಂಗ್ ಹಿಡಿಯೋದ್ರಲ್ಲಿ ಶಿವಣ್ಣ ಸೀನಿಯರ್ , ಅವರೇ ಲಾಂಗ್ ಹಿಡಿದರೆ ನಾನು ಅವರ ಹಿಂದೆ ಇರುತ್ತೇನೆ” ಅಪ್ಪಾಜಿ ಬಂದಿರೋದು ವಿಶ್ ಮಾಡಿರೋದು ದೊಡ್ಡ ವಿಷಯ ಅವರು ಬಂದಿದ್ದು ತುಂಬಾ ಖುಷಿ ಎಂದು ಶಿವಣ್ಣರನ್ನು ಸ್ಮರಿಸಿದ ಡಚ್ಚು ಮಾದ್ಯಮಗಳ ಎದುರು ತಮ್ಮ ಅನಿಸಿಕೆ ಬಿಚ್ಚಿಟ್ಟರು. ಈ ಮೂಲಕ ಇಬ್ಬರು ಸ್ಟಾರ್ ನಟರು ಒಟ್ಟಾಗಿ ತೆರೆಯನ್ನು ಹಂಚಿಕೊಳ್ಳಲು ತಮ್ಮಗಳ ಅಭ್ಯಂತರ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಇನ್ನೇನಿದ್ದರೂ ಗಟ್ಟಿ ಎದೆಗಾರಿಕೆಯ ನಿರ್ದೇಶಕರು ಯಾರಾದರೂ ಇವರಿಬ್ಬರಿಗೂ ಹೊಂದಿಕೆ ಆಗುವಂತಹ ಸ್ಕ್ರಿಪ್ಟ್ ತಾಯಾರಿಸಿ ಇವರ ದಿನಾಂಕಕ್ಕೆ ಕಾಯಬೇಕಷ್ಟೇ. ಕಾರಣ ಇಬ್ಬರೂ ಸಹ ಸದ್ಯ ಸಾಕಷ್ಟು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದು ಅವೆಲ್ಲದರ ಚಿತ್ರೀಕರಣ ಮುಗಿದ ಬಳಿಕವಷ್ಟೇ ಹೊಸ ಸಿನಿಮಾದತ್ತ ಅವರಿಬ್ಬರ ಚಿತ್ತ.