ಸುದ್ದಿ

ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ದೇವರಾಜ್ ಸಾಮಾಜಿಕ ಕಳಕಳಿ ಮೆಚ್ಚಿದ ದರ್ಶನ್…!

By admin

July 04, 2019

ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು.

ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಎಂದು ಹಾರೈಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜ್ವಲ್ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ಫ್ಲಾಕ್ಸ್, ಬ್ಯಾನರ್ ಅಂತ ಖರ್ಚು ಮಾಡುವ ಬದಲಿಗೆ ಅದೇ ಹಣದಲ್ಲಿ ನೋಟ್ ಬುಕ್ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರಜ್ವಲ್ ಕೆಲಸಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರ ಕಡೆಯಿಂದ ಬೆಂಬಲ ಸಿಕ್ಕಿದೆ. ಅಂದಹಾಗೆ, ಇತ್ತೀಚಿಗೆ ‘ಯಜಮಾನ’ ಸಿನಿಮಾದ ಹಾಡಿನಲ್ಲಿ ದರ್ಶನ್ ಜೊತೆಗೆ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದರು.

ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಕುಟುಂಬದವರು ಸುಮಾರು 90 ಲಕ್ಷ ರೂ. ಬೆಲೆ ಬಾಳುವ ಕೆಂಪು ಬಣ್ಣದ ವೋಲ್ವೋ ಎಕ್ಸ್ ಸಿ – 90 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಮುಂದೆ ಪ್ರಜ್ವಲ್ ಅವರ ತಂದೆ, ನಟ ದೇವರಾಜ್, ತಾಯಿ, ಪತ್ನಿ ರಾಗಿಣಿ ಹಾಗೂ ಸಹೋದರ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.