ಮನೆಗೆ ಪುಟ್ಟ ಕಂದ ಬರುತ್ತಿದೆ ಎಂದರೆ ಅದಕ್ಕಿಂತ ಸಂತೋಷದ ಕ್ಷಣ ಬೇರೆ ಯಾವುದಿದೆ ಹೇಳಿ..? ಮಗು ಹುಟ್ಟಿದಾಗಿನಿಂದ ಅದರ ಆಟ, ಪಾಠ, ನಗು, ಅಳು, ಚೇಷ್ಟೆ ಎಲ್ಲವನ್ನೂ ಕಣ್ತುಂಬಿಕೊಳ್ಳುವುದೇ ಚೆಂದ. ಅದರಲ್ಲೂ ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದರೆ….ಆ ಅನುಭವ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಈ ಫೋಟೋ ಬ್ರೆಜಿಲ್‍ನ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಫ್ಲಾವಿಯೋ ಎಂಬ ಸೈನಿಕನ ಪುಟ್ಟ ಕುಟುಂಬದ್ದು. ಫ್ಲಾವಿಯೋ ಪತ್ನಿ ತಾರ್ಸಿಲಾ ಕಳೆದ ಆಗಸ್ಟ್‍ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟುತ್ತಲೇ ಫ್ಲಾವಿಯೋ ಆಪರೇಷನ್ ಥಿಯೇಟರ್‍ಗೆ ಬಂದು ಆ ಮುದ್ದು ಕಂದನನ್ನು ಮಾತನಾಡಿಸಿದ್ದಾರೆ. ಅಪ್ಪನ ಧ್ವನಿ ಕೇಳುತ್ತಿದ್ದಂತೆ ಮಗು ಆಂಟೊನೆಲ್ಲಾ ಆತನನ್ನು ನೋಡಿ ಸ್ಮೈಲ್ ಮಾಡಿದೆ. ಆ ಕ್ಷಣವನ್ನು ಅಲ್ಲೇ ಇದ್ದ ವೈದ್ಯರು ಸೆರೆಹಿಡಿದಿದ್ದಾರೆ.
ಆಗ ತಾನೆ ಹುಟ್ಟಿದ ಮಕ್ಕಳು ಈ ರೀತಿ ನಗುವುದು ಅಪರೂಪ. ಆದರೆ ಆಂಟೊನೆಲ್ಲಾ ಅಪ್ಪನನ್ನು ನೋಡಿ ನಗೆ ಬೀರಿದ ಹಿಂದೆ ಒಂದು ವಿಶೇಷವಿದೆ. ತಾರ್ಸಿಲಾ ಗರ್ಭಿಣಿಯಾದಾಗಿನಿಂದ ಪತಿ ಫ್ಲಾವಿಯೋ ಆಕೆ ಹೊಟ್ಟೆ ಬಳಿ ಬಂದು ಮಗುವನ್ನು ಮಾತನಾಡಿಸುತ್ತಿದ್ದರಂತೆ. ಗಂಟೆಗಂಟೆಗೊಮ್ಮೆ ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್, ಗುಡ್ ಈವ್ನಿಂಗ್, ಐ ಲವ್ ಯೂ, ಹೀಗೆ ಮಗುವಿನ ಬಳಿ ಮಾತನಾಡುತ್ತಿದ್ದರಂತೆ. ಆಶ್ಚರ್ಯ ಎಂದರೆ ಫ್ಲಾವಿಯೋ ಹಾಗೆ ಮಾತನಾಡುತ್ತಿದ್ದಾಗಲೆಲ್ಲಾ ಗರ್ಭದಲ್ಲಿದ್ದ ಮಗು ಚಲನೆಯಾಡುತ್ತಿತ್ತಂತೆ. ಅದೇ ರೀತಿ ಮಗು ಹುಟ್ಟಿದಾಗ ಕೂಡಾ ಫ್ಲಾವಿಯೋ ಮಗಳನ್ನು ಮಾತನಾಡಿಸಿದ್ದಾರೆ. ಅಪ್ಪನ ಧ್ವನಿ ಕೇಳುತ್ತಿದ್ದಂತೆ ಆ ಪುಟ್ಟ ಕಂದ ಆ ಧ್ವನಿಯನ್ನು ಕಂಡುಹಿಡಿದು ಕೂಡಲೇ ಮಿಲಿಯನ್ ಡಾಲರ್ ಸ್ಮೈಲ್ ನೀಡಿದೆ. ಆಂಟೊನೆಲ್ಲಾ ಹುಟ್ಟಿದ್ದು ಆಗಸ್ಟ್‍ನಲ್ಲಾದರೂ ಈ ಅಪರೂಪದ ಫೋಟೋ ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ.