ಸುದ್ದಿ

ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

By admin

July 27, 2019

ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ ಮೊದಲ ಹಾಗೂ ಪ್ರಮುಖ ಸವಾಲು. ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಮೂರೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗಲೂ ಆಗುತ್ತಾ..? ಅಥವಾ ಆಗಲ್ವಾ..? ಎಂಬ ಕುತೂಹಲ ಮೂಡಿದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್, ಜೆಡಿಎಸ್‌ನ 16 ಶಾಸಕರು ರಾಜೀನಾಮೆ ಕೊಟ್ಟು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್‌.ಶಂಕರ್ ಅನರ್ಹ ನಂತರ ವಿಧಾಸನಭೆ ಬಲ 221ಕ್ಕೆ ಕುಸಿದಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹ ಆದರೆ ಬಿಜೆಪಿಗೆ ತೊಂದರೆ ಇಲ್ಲ. ಒಂದು ವೇಳೆ ಅವರು ಕೊನೆ ಕ್ಷಣದಲ್ಲಿ ನಿಷ್ಠೆ ಬದಲಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ವಾಪಸ್ಸಾದರೆ ಬಿಜೆಪಿ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ. ಈ ಆತಂಕವೇ ಬಿಜೆಪಿ ವರಿಷ್ಠ ಅಮಿತ್‌ ಶಾಗೆ ಕಾಡ್ತಿದೆ.

ಅಮಿತ್‌ ಶಾ ಷರತ್ತುಗಳಿಗೆ ಒಪ್ಪಿಕೊಂಡು ಸರ್ಕಾರ ರಚಿಸಿರುವ ಯಡಿಯೂರಪ್ಪ ಅವರ ಮುಂದೆ ಈಗ ಬಹುಮತ ಸಾಬೀತು ಸವಾಲು ಇದೆ. ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ.

ಇತ್ತ, ಬಿಜೆಪಿ ಸರ್ಕಾರ ರಚನೆಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್ -ಜೆಡಿಎಸ್‌, ಬಹುಮತ ಇಲ್ಲದೆ ಸರ್ಕಾರ ರಚನೆಗೆ ಹೇಗೆ ಸಾಧ್ಯ..? ಎಂದು ಪ್ರಶ್ನಿಸಿವೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿ ರಾಜ್ಯಪಾಲರ ಕ್ರಮ ಖಂಡಿಸಿವೆ. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ರಾಜ್ಯಪಾಲರು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ‌ ನೀಡಿದ್ದು, ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್‌ ಹೇಳಿದೆ. ದೇಶದ ಕುದುರೆ ವ್ಯಾಪಾರ ಪಕ್ಷವೊಂದು ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿದೆ ಎಂದು ಟೀಕಿಸಿದೆ.

ಪ್ರಜಾಪ್ರಭುತ್ವದ ಪ್ರಕಾರ ಬಿಜೆಪಿ ಸರ್ಕಾರ ರಚನೆ ಅಸಾಧ್ಯ. ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿರುವ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಬಿಜೆಪಿಗೆ ಈಗ ಕೇವಲ 105 ಶಾಸಕರ ಸಂಖ್ಯ ಬಲವಷ್ಟೇ ಇದೆ. ಉಳಿದ 6 ಜನರಿಗೆ ಅವರು ಏನು ಮಾಡುತ್ತಾರೆ..? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.ಮಹಾರಾಷ್ಟ್ರದ ವಿವಿದೆಡೆ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಯಡಿಯೂರಪ್ಪ ಬಹುಮತ ಸಾಬೀತು ಮಾಡುವವರೆಗೆ ಅಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ಯಾವತ್ತು ಬಿಎಸ್‌ವೈ ಸದನದಲ್ಲಿ ಬಹುಮತ ಸಾಬೀತು ಮಾಡ್ತಾರೋ ಅಂದು ಕರ್ನಾಟಕಕ್ಕೆ ವಾಪಸ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಅತೃಪ್ತರು ಬಹುಮತ ಸಾಬೀತು ದಿನ ಗೈರಾಗುವ ಮೂಲಕ ಸದನದ ಮ್ಯಾಜಿಕ್‌ ನಂಬರ್ 111 ಕುಸಿಯುವಂತೆ ಮಾಡ್ತಾರೆ. ಆಗ ಯಡಿಯೂರಪ್ಪ ಸುಲಭವಾಗಿ ಬಹುಮತ ಸಾಬೀತು ಮಾಡಬಹುದು.