ಹಲವು ಪಾತ್ರಗಳ ಮೂಲಕ ಸಿನಿಪ್ರಿಯರನ್ನು ಚಿರಂಜೀವಿ ಸರ್ಜಾ ರಂಜಿಸಿದ್ದರು. ಹಾಗಿದ್ದರೂ ಅಭಿಮಾನಿಗಳಿಗೆ ಸಮಾಧಾನ ಆಗಿರಲಿಲ್ಲ. ಯಾಕೆಂದರೆ, ಫ್ಯಾನ್ಸ್‌ಗೆ ಇದ್ದ ಮಹತ್ವದ ಆಸೆಯೊಂದು ಇನ್ನೂ ಈಡೇರಿರಲಿಲ್ಲ. ಏನದು? ಸರ್ಜಾ ಕುಟುಂಬದ ಸ್ಟಾರ್ ಹೀರೋಗಳೆಲ್ಲ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಕನಸು ಕಂಡಿದ್ದರು. ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೊತೆ ಅವರ ಮಾವ ಅರ್ಜುನ್ ಸರ್ಜಾರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕು ಎಂಬ ಆಸೆ ಅವರದ್ದಾಗಿತ್ತು.
ಈ ವಿಚಾರದ ಬಗ್ಗೆ ಸರ್ಜಾ ಕುಟುಂಬದ ಹೀರೋಗಳಿಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇತ್ತು. ‘ನೀವು ಮೂವರೂ ಯಾವಾಗ ಜೊತೆಯಾಗಿ ನಟಿಸುತ್ತೀರಿ?’ ಎಂದು ಕೇಳಿದಾಗೆಲ್ಲ, ‘ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇವೆ’ ಎಂದು ಉತ್ತರ ಅವರಿಂದ ಬರುತ್ತಿತ್ತು. ಒಂದಲ್ಲ ಒಂದು ದಿನ ಅಂಥ ಕಥೆ ಸಿಗಲಿದೆ, ಮೂವರನ್ನೂ ಒಂದೇ ಸಿನಿಮಾದಲ್ಲಿ ನೋಡಬಹುದು ಎಂದು ಅಭಿಮಾನಿಗಳು ಕಂಡಿದ್ದ ಕನಸು ಕಡೆಗೂ ಕನಸಾಗಿಯೇ ಉಳಿಯಬೇಕಾಯಿತು.
ಅರ್ಜುನ್ ಸರ್ಜಾ ಅವರಿಗೆ ಸೋದರಳಿಯರಾದ ಚಿರಂಜೀವಿ ಮತ್ತು ಧ್ರುವ ಬಗ್ಗೆ ಅಪಾರ ಕಾಳಜಿ ಇತ್ತು. ಅವರಿಬ್ಬರ ವೃತ್ತಿಜೀವನಕ್ಕೆ ಅರ್ಜುನ್ ಅವರೇ ಮಾರ್ಗದರ್ಶಕರು. ಇನ್ನು, ಚಿರು ಮತ್ತು ಧ್ರುವ ನಡುವೆ ಕೂಡ ತುಂಬ ಆತ್ಮೀಯತೆ ಇತ್ತು. ಪರಸ್ಪರರ ಸಿನಿಮಾಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಇಬ್ಬರು ಜೊತೆಯಾಗಿ ಕಾಲ ಕಳೆದ ವಿಡಿಯೋಗಳನ್ನು ಟಿಕ್‌ಟಾಕ್ ಮೂಲಕ ಚಿರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು.