ಬಲು ದುಬಾರಿಯಾಗಿದ್ದ ಅಂಗಾಂಗ ಕಸಿ ಚಿಕಿತ್ಸೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅಂಗಾಂಗ ಕಸಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಮತ್ತು ಔಷಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು ಸುಲಭವಾಗಿ ಹೃದಯ, ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಅಡಿ ಕಿಡ್ನಿ ಕಸಿಗೆ 3 ಲಕ್ಷ ರೂ., ಹೃದಯ ಕಸಿಗೆ 11 ಲಕ್ಷ ರೂ., ಲಿವರ್ ಕಸಿಗೆ 12 ಲಕ್ಷ ರೂ. ನೆರವು ನೀಡಲಾಗುವುದು.
ಕಳೆದ ಜನವರಿಯಲ್ಲಿ ಯೋಜನೆ ಆರಂಭವಾಗಿದೆ. ಇತ್ತೀಚೆಗೆ ಅತಿಮುಖ್ಯ ಅಂಗಾಂಗಗಳಾದ ಹೃದಯ, ಯಕೃತ್, ಮೆದೋಜೀರಕ ಗ್ರಂಥಿ, ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೊನೆ ಹಂತದಲ್ಲಿ ರೋಗಿ ಉಳಿಸಲು ಅಂಗಾಂಗ ಕಸಿ ಮಾಡಲಾಗುತ್ತದೆ.
ಅಂಗಾಂಗ ಕಸಿ ಚಿಕಿತ್ಸೆ ದುಬಾರಿಯಾಗಿದ್ದು, ಬಡವರು, ಮಧ್ಯಮ ವರ್ಗಕ್ಕೆ ಹೊರೆಯಾಗಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ರಾಜ್ಯ ಅಂಗಾಂಗ ಕಸಿ ಯೋಜನೆಯನ್ನು 2018 ರಲ್ಲಿ ಆರಂಭಿಸಿ 30 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯ ನಿರ್ವಹಣೆ ಮಾಡುತ್ತಿದೆ.