ಒತ್ತಡದ ಜೀವನಶೈಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ, ಅದರಲ್ಲೊಂದು ರಕ್ತದೊತ್ತಡ. ರಕ್ತದೊತ್ತಡ ಸಮಸ್ಯೆಯಿಂದ ಹೃದಯಾಘತ, ಹೃದಯ ಸ್ತಂಭನ ಉಂಟಾಗುವುದು. ಇಲ್ಲಿ ರಕ್ತದೊತ್ತಡವನ್ನು ನಿಯತ್ರದಲ್ಲಿಡುವ ಟಿಪ್ಸ್ ನೀಡಿದ್ದೇವೆ ನೋಡಿ.ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ ಈ ರಕ್ತದೊತ್ತಡ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುವುದು.
ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್(ಪಾರ್ಶ್ವವಾಯು), ಹೃದಯಾಘಾತ, ಹೃದಯ ಸ್ತಂಭನ ಮುಂತಾದ ಸಮಸ್ಯೆ ಕಂಡು ಬರುವುದು. ಆರೋಗ್ಯಕರ ಜೀವನಶೈಲಿ, ಧ್ಯಾನ, ವ್ಯಾಯಾಮ ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ರಕ್ತದೊತ್ತಡ ಸಮಸ್ಯೆ ಇರುವವರು ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಈಜು ಇವೆಲ್ಲಾ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ತುಂಬಾ ಸಹಕಾರಿ. ವಾರದಲ್ಲಿ 5 ದಿನ ವ್ಯಾಯಾಮ ಮಾಡಿದರೆ ಒಳ್ಳೆಯದು.
ರಕ್ತದೊತ್ತಡ ಸಮಸ್ಯೆ ಇರುವವರು ಆಹಾರ ತಿನ್ನುವಾಗ ಉಪ್ಪಿನ ಪ್ರಮಾಣದ ಕಡೆ ಗಮನ ಕೊಡುವುದು ಒಳ್ಳೆಯದು. ಸಾಮಾನ್ಯವಾಗಿ ಒಬ್ಬ ಮನುಷ್ಯ ದಿನದಲ್ಲಿ 9-12ಗ್ರಾಂ ಉಪ್ಪಿನಂಶ ಸೇವಿಸುತ್ತಾನೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 5ಗ್ರಾಂಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉಪ್ಪು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ಅಧಿಕ ರಕ್ತದೊತ್ತಡ ನಿವಾರಣೆಗೆ ಆಹಾರ ಸೂತ್ರವನ್ನೂ ಪಾಲಿಸುವುದು ಪರಿಣಾಮಕಾರಿ. ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ದಾಸವಾಳದ ಚಹಾ : ಇದರಲ್ಲಿ ಆ್ಯಂಥೋಸಿಯಾನಿನ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ರಕ್ತನಾಳಗಳ ಅಗಲ ಕಿರಿದಾಗುವುದನ್ನು ತಡೆಯುತ್ತವೆ.
ಗ್ರೀನ್‌ಟೀ : ಇದರಲ್ಲಿರುವ ಪಾಲಿಫೆನಾಲ್ ಅಂಶವು ರಕ್ತದೊತ್ತಡವನ್ನು ತಡೆಯುತ್ತದೆ.
ದಾಳಿಂಬೆ ಜ್ಯೂಸ್ : ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಅಪಧಮನಿಗಳಲ್ಲಿ ತಡೆ ಉಂಟಾಗುವುದನ್ನು ತಪ್ಪಿಸುತ್ತದೆ.
ಬೀಟ್‌ರೂಟ್ ಜ್ಯೂಸ್ : ಇದು ಅಪಧಮನಿಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಪ್ರತಿದಿನ 250 ಎಂಎಲ್ ಬೀಟ್‌ರೂಟ್ ಜ್ಯೂಸ್ ಸೇವನೆಯಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
ಬಾಳೆಹಣ್ಣು : ಪೊಟ್ಯಾಷಿಯಂ ಅಧಿಕವಿರುವ ಆಹಾರ ಸೇವನೆಯೂ ಉತ್ತಮ. ಹೀಗಾಗಿ ಬಾಳೆಹಣ್ಣು ರಕ್ತದೊತ್ತಡ ಇರುವವರಿಗೆ ಪೂರಕ.
ಬ್ರೊಕೊಲಿ: ಪೊಟ್ಯಾಷಿಯಂ, ಮೆಗ್ನೇಷಿಯಂ ಹಾಗೂ ಕ್ಯಾಲ್ಶಿಯಂ ಅಧಿಕವಿರುವ ಬ್ರೊಕೊಲಿ ರಕ್ತದೊತ್ತಡ ನಿಯಂತ್ರಿಸಲು ಅತ್ಯುತ್ತಮ.