ಬೆಂಗಳೂರು: ಬಿಎಂಟಿಸಿ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ.
2018 ರ ಮಾರ್ಚ್ 23 ರಂದು 100 ಕಿರಿಯ ಸಹಾಯಕರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 6 ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರಬೇಕು. ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು ಎಂದು ತಿಳಿಸಲಾಗಿತ್ತು.
26 ಸಾವಿರಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಜೂನ್ 10 ರಂದು ಪರೀಕ್ಷೆ ಬರೆದಿದ್ದರು. ಮೂಲ ದಾಖಲಾತಿಗಳ ಪರಿಶೀಲನೆಗೆ 1:5 ಅನುಪಾತದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿತ್ತು. ಮೂಲ ದಾಖಲಾತಿ ಪರಿಶೀಲನೆ ನಡೆಸಿದ ಬಿಎಂಟಿಸಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಒಂದು ವರ್ಷದಿಂದ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದಿರುವ ಪ್ರಮಾಣ ಪತ್ರವನ್ನು ಹಾಜರು ಪಡಿಸದ ಹಿನ್ನಲೆಯಲ್ಲಿ ಅರ್ಹರು ಇಲ್ಲ ಎಂದು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಅಭ್ಯರ್ಥಿಗಳ ಅರ್ಜಿ ಶುಲ್ಕವನ್ನು ವಾಪಸ್ ಕೊಡಲಾಗುವುದು ಎಂದು ಹೇಳಲಾಗಿದೆ.