ಕನ್ನಡ ನಟಿ, ಸಹಾಯಕ ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೋಟೂರು ಇಷ್ಟುದಿನ ‘ಬಿಗ್ ಬಾಸ್’ ಮನೆಯೊಳಗೆ ವಿವಾದಕ್ಕೀಡಾಗಿದ್ದರು. ನಾಮಿನೇಟ್ ಆದಾಗೆಲ್ಲಾ, ಡೇಂಜರ್ ಝೋನ್ ನಿಂದ ಸೇಫ್ ಆಗಲು ಚೈತ್ರ ಕೋಟೂರು ಕಟ್ಟಿದ ಕಥೆಗಳು, ಮಾಡಿದ ಅವಾಂತರಗಳು ಒಂದೆರಡಲ್ಲ. ಆದರೆ ಆ ಎಲ್ಲಾ ವಿವಾದಗಳು ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು. ಈಗ ನೋಡಿದ್ರೆ, ಚೈತ್ರಕೋಟೂರು ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಇಳಿದಿದೆ.
‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಂಬೇಡ್ಕರ್ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಅಷ್ಟಕ್ಕೂ, ಚೈತ್ರ ಕೋಟೂರು ಏನು ಮಾಡಿದರು.?ಅಸ್ಪೃಶ್ಯತೆ ಬಗ್ಗೆ ಅವರ ಬಾಯಿಂದ ಬಂದ ಮಾತೇನು.? ಅಂಬೇಡ್ಕರ್ ಸೇನೆ ಕೋಪಿಸಿಕೊಳ್ಳಲು ಕಾರಣವೇನು ಅಂತೀರಾ.?
‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಓಪನ್ ನಾಮಿನೇಷನ್ ಆಗಿದ್ರಿಂದ ತಮ್ಮನ್ನ ಯಾರ್ಯಾರು ನಾಮಿನೇಟ್ ಮಾಡಿದರು ಮತ್ತು ಅವರುಗಳು ಕೊಟ್ಟ ಕಾರಣಗಳೇನು ಎಂಬುದು ಚೈತ್ರ ಕೋಟೂರುಗೆ ಸ್ಪಷ್ಟವಾಗಿ ತಿಳಿದು ಬಂತು. ನಾಮಿನೇಷನ್ಪ್ರಕ್ರಿಯೆಯಲ್ಲಿ ಚೈತ್ರ ಕೋಟೂರು ವಿರುದ್ದ ದೀಪಿಕಾ ದಾಸ್ ವೋಟ್ ಮಾಡಿದ್ದರು. ಆ ಬಗ್ಗೆ ಹರೀಶ್ರಾಜ್ ಬಳಿ ಚರ್ಚೆ ಮಾಡುತ್ತಿದ್ದಾಗ,”ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ, ತಬ್ಬಿಕೊಳ್ಳುತ್ತಾರೆ, ಮುತ್ತು ಕೊಡುತ್ತಾರೆ. ನನ್ನಮಾತ್ರ ಮುಟ್ಟಲ್ಲ. ಏನು Untouchables ನಾವು.? ಅಸ್ಪೃಶ್ಯರಾ ನಾವು..”ಎಂದು ನಗುತ್ತಾರೆ.
ಇದು ನೆಟ್ಟಿಗರನ್ನು ಕೆರಳಿಸಿದೆ. ಅಂಬೇಡ್ಕರ್ ಸೇನೆಯ ಆಕ್ರೋಶಕ್ಕೆ ಚೈತ್ರ ಕೋಟೂರು ರವರ ಈ ಮಾತೇ ಕಾರಣವಾಗಿದೆ. ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ ಚೈತ್ರ ಕೋಟೂರು ವಿರುದ್ಧ ಬೀದರ್ ಜಿಲ್ಲೆಯ ಅಂಬೇಡ್ಕರ್ ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಅಸ್ಪೃಶ್ಯತೆ ವಿರುದ್ಧ ಹಗುರವಾಗಿ ಮಾತನಾಡಿದ ಚೈತ್ರ ಕೋಟೂರುಗೆ ಬುದ್ಧಿಕಲಿಸಲು ನವೆಂಬರ್ 9 ರಂದು ಬಿಡದಿ ಬಳಿಯ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ನಡೆಸಲು ಅಂಬೇಡ್ಕರ್ ಸೇನೆ ಸಜ್ಜಾಗಿದೆ.