ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.
ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.
ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.
ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.
ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.