ಗುಜರಾತ್‍ನ ಜಾಮ್‍ನಗರದಲ್ಲಿ ಇದೇ ರೀತಿಯ ಲವ್‍ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು.
ಕಣ್ಣೀರಿನ ಪ್ರೇಮ ಕಥೆ ನಡೆದಿರುವುದು ಗುಜರಾತಿನ ಜಾಮ್ ನಗರದಲ್ಲಿ. ಚಿರಾಗ್ ಮತ್ತು ಹಿರಲ್ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ ಹಿರಲ್ ಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಈಗಾಗಲೇ ಆರು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಿರಲ್ ಮಂಗಳವಾರ ಕೊನೆಯುಸಿರೆಳೆದ್ಲು. ಕೈ, ಕಾಲು ಕಳೆದುಕೊಂಡಿದ್ರೂ ಹಿರಲ್ ಮೇಲೆ ಚಿರಾಗ್ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಕಾಲ ಹಿರಲ್ ಆರೈಕೆ ಮಾಡಿದ್ದ ಚಿರಾಗ್ ಸಾಕಷ್ಟು ಪ್ರೀತಿ ನೀಡಿದ್ದ.
ಇಬ್ಬರು ಒಂದಾಗಿ ಬಾಳುವ ಕನಸು ಕಂಡಿದ್ದರು. ಆದ್ರೆ ಹಿರಲ್ ಸಾವು ಚಿರಾಗ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಚಿರಾಗ್ ನೋವು ಆಸ್ಪತ್ರೆ ಸಿಬ್ಬಂದಿ ಕಣ್ಣಲ್ಲೂ ನೀರು ತರಿಸಿತ್ತು. ಚಿಕ್ಕ ಚಿಕ್ಕ ವಿಷಯಕ್ಕೆ ಜಗಳವಾಡಿ ಕೊನೆಗೆ ಡೈವೋರ್ಸವರೆಗೂ ಹೋಗುವ ಸಂಬಂಧಗಳ ನಡುವೆ ಚಿರಾಗ್ ತನ್ನ ಪ್ರೀತಿಯ ಹಿರಲ್ ಮೇಲೆ ತೋರಿದ ಪ್ರೀತಿ ನಿಜಕ್ಕೂ ಇತರರಿಗೆ ಮಾದರಿ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವನಪೂರ್ತಿ ಯಾರೊಂದಿಗೆ ಇರಬೇಕು ಎಂದು ಚಿರಾಗ್ ಆಸೆಪಟ್ಟಿದ್ದನೋ ಆಕೆ ಅರ್ಧದಲ್ಲೇ ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ವಿಧಿ ವಿಪರ್ಯಾಸ.