ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಎಂಬ ಗ್ರಾಮ ಈ ಒಂದು ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಮಗು ತೊಟ್ಟಿಲಿನಲ್ಲಿ ಅಳುತ್ತಿದ್ದ ಸಮಯದಲ್ಲಿ ಮನೆಯೊಳಗೆ ಬರುವ ಈ ಬಸಪ್ಪ ಎಂಬ ಎತ್ತು ತೊಟ್ಟಿಲನ್ನು ತೂಗಿ ಮಗುವನ್ನು ಮಲಗಿಸಿದೆ.
ಜೊತೆಗೆ ತನ್ನ ಕೊಂಬಿನಲ್ಲಿ ಕಟ್ಟಿದ್ದ ನೋಟಿನ ಕಂತೆಯನ್ನು ತೊಟ್ಟಿಲಿಗೆ ಬೀಳಿಸಿದೆ. ಇದನ್ನು ನೋಡಿದ ಜನತೆ ಇದು ದೈವ ಸ್ವರೂಪಿ ಬಸವಣ್ಣನ ಪವಾಡ ಎಂದರು. ಈ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರದ ಕವಾಣಪುರ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ಎರಡು ವರ್ಷಗಳ ಹಿಂದೆ ಈ ಬಸವನನ್ನು ಬಿಡಲಾಗಿತ್ತು. ಅಂದಿನಿಂದಲೂ ದೈವಿ ಸ್ವರೂಪಿ ಬಸಪ್ಪ ಎಂದೇ ಹೆಸರುವಾಸಿಯಾಗಿರುವ ಈ ಎತ್ತು ಹಲವು ಪವಾಡಗಳನ್ನು ಸೃಷ್ಟಿಸಿದ್ದು, ಜಮೀನು ವ್ಯಾಜ್ಯ, ದೇವಾಲಯಕ್ಕೆ ಪೂಜಾರಿಗಳನ್ನು ಗೊತ್ತು ಮಾಡುವುದು, ಭೀತಿ ಶಂಕೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಹೊರ ಜಿಲ್ಲೆಗಳಿಗೆ ತೆರಳಿ ತನ್ನ ಪವಾಡದಿಂದ ಸಮಸ್ಯೆಗಳನ್ನು ಪರಿಹರಿಸಿರುವುದಾಗಿ ಭಕ್ತರು ತಿಳಿಸುತ್ತಾರೆ.
ಅಂತೆಯೇ ಡಣ್ಣಾಯಕನಪುರ ಗ್ರಾಮದಲ್ಲಿ ಕುಟುಂಬವೊಂದರ ಸಮಸ್ಯೆ ಪರಿಹರಿಸಲು ತೆರಳಿದ್ದ ಬಸಪ್ಪ ಅದೇ ಮನೆಯ ಮಗುವನ್ನು ತೊಟ್ಟಿಲು ತೂಗಿ ಮಲಗಿಸಿ ತನ್ನ ಕೊಂಬಿಗೆ ಕಟ್ಟಿದ್ದ ಹಣವನ್ನು ತೊಟ್ಟಿಲಿಗೆ ಹಾಕಿದೆ. ತೊಟ್ಟಿಲಿಗೆ ಹಾಕಿದ್ದ ಹಣವನ್ನು ವಾಪಸ್ಸು ಪಡೆಯದೇ ಅದೇ ಹಣದಲ್ಲಿ ಮಗುವಿಗೆ ಮೀಸಲಿಡುವಂತೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆಯಂತೆ.