ಪ್ರತಿ ವರ್ಷದಂತೆ ಈ ಬಾರಿಯೂ ಹೊಸತನದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗಾಗಿ ಬಸವನಗುಡಿ ಸಜ್ಜಾಗುತ್ತಿದೆ. ಕಡೇ ಕಾರ್ತೀಕ ಸೋಮವಾರ(ನ.25)ದಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಪರಿಚಯಿಸಲು ಭಿನ್ನರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಮಾಗಡಿ, ಕನಕಪುರ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಕಡ್ಲೆಕಾಯಿ ಬರುತ್ತದೆ. ಈ ಬಾರಿ ಈ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ ಸಾಧ್ಯತೆಯಿದೆ.
ಚುನಾವಣೆ ನೀತಿ ಸಂಹಿತೆಯೇನಾದರೂ ಅಡ್ಡಿಯಾಗುವುದೇ ಎಂಬ ಬಗ್ಗೆ ಪ್ರಶ್ನೆ ಏಳುತ್ತಿದೆ. ಆದರೆ ಆಯೋಜಕರು, ಶತಮಾನಗಳಿಂದಲೂ ನಡೆಯುತ್ತಿರುವ ಸಾಂಪ್ರದಾಯಿಕ ಆಚರಣೆಯಾಗಿರುವುದರಿಂದ ಇದಕ್ಕೆ ಯಾವುದೇ ಅಡ್ಡಿ,ಆತಂಕಗಳು ಎದುರಾಗುವುದಿಲ್ಲ ಎನ್ನುತ್ತಾರೆ.
ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಹಾಗೂ ಬಸವನಿಗೆ ಕಡಲೆ ಕಾಯಿಗಳ ಅಭಿಷೇಕ ಇತ್ಯಾದಿಗಳು ನಡೆಯಲಿವೆ. ಈ ಬಾರಿಯ ಪರಿಷೆಯಲ್ಲಿ ಕನಿಷ್ಠ ಎರಡು ಸಾವಿರ ಮಳಿಗೆಗಳು ತೆರೆಯಲಿವೆ. ಇದಲ್ಲದೆ ಪೀಪಿ ಮತ್ತಿತರ ಸಾಮಗ್ರಿಗಳನ್ನು ಮಾರುವ ಸಂಚಾರಿ ಮಾರಾಟಗಾರರು ನೂರಾರು ಸಂಖ್ಯೆಯಲ್ಲಿರುತ್ತಾರೆ.