ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಿಡುಗಡೆ ಪೂರ್ವದಲ್ಲಿ ಯಾವ ಖದರಿನೊಂದಿಗೆ ಸಾಗಿ ಬಂದಿತ್ತೋ ಅದನ್ನೇ ಮೀರಿಸುವಂತೆ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ.
ಈ ಮೂಲಕ ನಾಯಕ ಶ್ರೀಮುರಳಿ ಮತ್ತು ಶ್ರೀಲೀಲಾ ಜೋಡಿ ದೊಡ್ಡ ಮಟ್ಟದಲ್ಲಿಯೇ ಕಮಾಲ್ ಮಾಡಿದೆ. ಓರ್ವ ನಿರ್ದೇಶಕನಾಗಿ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಕಣ್ಣುಗಳಲ್ಲಿಯೂ ಮಹಾ ಗೆಲುವಿನ ಖುಷಿ ಸ್ಪಷ್ಟವಾಗಿಯೇ ಫಳ ಫಳಿಸುತ್ತಿದೆ.ಇದು ಭರಪೂರ ಗೆಲುವು. ಒಂದು ಸಿನಿಮಾ ಒಪ್ಪಿಕೊಂಡರೆ ಅದರಲ್ಲಿನ ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ನಾಯಕ ನಟ, ಪ್ರತೀ ಕ್ಷಣವೂ ಸಿನಿಮಾವನ್ನೇ ಧ್ಯಾನಿಸುವ ನಿರ್ದೇಶಕ ಮತ್ತು ಪ್ರತೀ ಫ್ರೇಮಿನಲ್ಲಿಯೂ ಅದ್ಧೂರಿತನವೇ ಮಿರುಗಬೇಕೆಂಬ ಕನಸು ಹೊಂದಿರೋ ನಿರ್ಮಾಪಕರು.
ಇವಿಷ್ಟರ ಮಹಾ ಸಂಗಮವಾದರೆ ಜನ ಚಪ್ಪರಿಸಿಕೊಂಡು ನೋಡುವಂಥಾ ದೃಶ್ಯಕಾವ್ಯವೊಂದು ಅಣಿಗೊಳ್ಳುತ್ತದೆ ಎಂದೇ ಅರ್ಥ. ಅದು ಭರಾಟೆ ವಿಚಾರದಲ್ಲಿಯೂ ನಿಜವಾಗಿದೆ. ಎತ್ತಲಿಂದ ಯಾವ ವಿಭಾಗಗಳತ್ತ ಕಣ್ಣು ಹಾಯಿಸಿದರೂ ಎಲ್ಲದರಲ್ಲಿಯೂ ಪರಿಪೂರ್ಣ ಕಸುಬುದಾರಿಕೆಯ ಭರಾಟೆಯೇ ಎದ್ದು ಕಾಣಿಸುತ್ತದೆ. ಅದಕ್ಕೆ ತಕ್ಕುದಾದ ಸಮ್ಮಾನವೇ ಪ್ರೇಕ್ಷಕರ ಕಡೆಯಿಂದ ಸಿಕ್ಕಿದೆ.
ರಾಜಸ್ಥಾನದ ಮರುಭೂಮಿಯ ಹಿನ್ನೆಲೆಯಲ್ಲಿ ಶ್ರೀಮುರಳಿ ಭಿನ್ನವಾದ ಪೋಷಾಕಿನಲ್ಲಿ ಮಿಂಚಿದ ಫೋಟೋಗಳ ಮೂಲಕವೇ ಈ ಸಿನಿಮಾ ಕ್ರೇಜ್ ತಾರಕಕ್ಕೇರಿತ್ತು. ಅದೇ ಆವೇಗದೊಂದಿಗೆ ಸಾಗಿ ಬಂದು ಬಿಡುಗಡೆಗೊಂಡ ಭರಾಟೆಗೆ ಮೊದಲ ದಿನವೇ ರಾಜ್ಯಾದ್ಯಂತ ಸಿಕ್ಕಿದ್ದ ಭಾರೀ ಜನ ಬೆಂಬಲದ ಭರಾಟೆ. ಅದೆಂಥಾ ಅದ್ಧೂರಿ ಓಪನಿಂಗ್ ಎಂದರೆ, ಅದರ ಪರಿಣಾಮ ಗಳಿಕೆಯ ಮೊತ್ತದಲ್ಲಿಯೇ ಪ್ರತಿಫಲಿಸಿತ್ತು. ಮೊದಲ ದಿನ ಈ ಚಿತ್ರ ಮಾಡಿದ ಕಲೆಕ್ಷನ್ನು 8.36 ಕೋಟಿ. ಇದೀಗ ವಾರ ಕಳೆಯೋದರೊಳಗೇ ಆ ಮೊತ್ತ ಇಪ್ಪತೈದು ಕೋಟಿಯನ್ನೂ ಕ್ರಾಸ್ ಮಾಡಿಕೊಂಡು ಮುಂದುವರೆಯುತ್ತಿದೆ. ಎಲ್ಲ ಸೆಂಟರ್ ಗಳಲ್ಲಿಯೂ ಅದ್ಭುತವೆಂಬಂಥಾ ಪ್ರದರ್ಶನ ಕಾಣುತ್ತಿರೋ ಭರಾಟೆ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ.