ಚಾಲಕರೊಬ್ಬರು ತನ್ನ ಆಟೋವನ್ನು ಮನೆಯಂತೆ ಮಾಡಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸತ್ಯವನ್ ಗೈಟ್ ಅವರು ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲಿ ಎಂದು ತಮ್ಮ ಆಟೋದಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸತ್ಯವನ್ ಅವರ ಆಟೋದಲ್ಲಿ ವಾಶ್ ಬೇಸಿನ್, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಗಿಡಗಳು ಇನ್ನಿತರ ಸೌಲಭ್ಯಗಳು ಕಾಣಬಹುದು.
ವಿಶೇಷ ಏನಂದರೆ ಸತ್ಯವನ್ ಅವರು ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ಯಾವುದೇ ಹಣ ಪಡೆಯುವುದಿಲ್ಲ. ಅಲ್ಲದೆ ಸತ್ಯವನ್ ತಮ್ಮ ಆಟೋ ಹಿಂದೆ ‘ಮುಂಬೈನ ಮೊದಲ ಹೋಂ ಸಿಸ್ಟಮ್ ಆಟೋ ರಿಕ್ಷಾ’ ಎಂದು ಬರೆಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸತ್ಯವನ್, ನೀವು ನನ್ನ ಆಟೋದಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಹುದು. ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತೆ. ವಾಶ್ ಬೇಸಿನ್ ಕೂಡ ಇದೆ. ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ನಾನು ಯಾವುದೇ ಹಣ ಪಡೆಯುವುದಿಲ್ಲ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಆಟೋವನ್ನು ಈ ರೀತಿ ಬದಲಾಯಿಸಿದೆ ಎಂದು ತಿಳಿಸಿದ್ದಾರೆ.
ಸತ್ಯವನ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವರು, ‘ಒಳ್ಳೆಯ ಕೆಲಸ’, ‘ಉತ್ತಮ ಕಾರ್ಯ ಮಾಡುತ್ತಿದ್ದಿರಿ’, ‘ಕೇವಲ ಮುಂಬೈಯವರು ಈ ರೀತಿ ಮಾಡಬಹುದು’ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ.