ಡಿಜಿಟಲ್ ಯುಗದಲ್ಲಿ ಜನರು ಎಟಿಎಂ ಬಳಕೆ ಹೆಚ್ಚು ಮಾಡಿದ್ದಾರೆ. ಒಂದು ದಿನ ಎಟಿಎಂ ಕೆಲಸ ನಿಲ್ಲಿಸಿದ್ರೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಟಿಎಂ ಬಳಕೆ ಮಾಡ್ತಿದ್ದಾರೆ.
ಎಟಿಎಂ ಬಳಕೆ ವೇಳೆ ಕೆಲವೊಂದು ತಪ್ಪುಗಳನ್ನು ನಾವು ಮಾಡ್ತೇವೆ. ಈ ತಪ್ಪುಗಳೇ ಹ್ಯಾಕರ್ ಗೆ ಅನುಕೂಲ ಮಾಡಿಕೊಡುತ್ತದೆ. ಎಟಿಎಂ ಬಳಕೆ ವೇಳೆ ಕೆಲವೊಂದು ಸಂಗತಿಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ.
ಎಟಿಎಂನಲ್ಲಿ ಕಾರ್ಡ್ ಹಾಕುವ ಸ್ಲಾಟ್ ಅನ್ನು ಮೊದಲು ಎಚ್ಚರಿಕೆಯಿಂದ ನೋಡಿ. ಕಾರ್ಡ್ ಸ್ಲಾಟ್ ಅನುಮಾನ ಹುಟ್ಟಿಸುವಂತಿದ್ದರೆ, ಸ್ಲಾಟ್ ತಿದ್ದುಪಡಿಯಾಗಿದ್ದರೆ, ತುಂಬಾ ಸಡಿಲ ಅಥವಾ ಬಿಗಿ ಎನಿಸಿದ್ರೆ ಯಾವುದೇ ಕಾರಣಕ್ಕೂ ಎಟಿಎಂನಲ್ಲಿ ಹಣ ಡ್ರಾ ಮಾಡಬೇಡಿ.
ಕಾರ್ಡ್ ಸ್ಲಾಟ್ ನಲ್ಲಿ ಉರಿಯುವ ಲೈಟ್ ಬಗ್ಗೆ ಹೆಚ್ಚು ಗಮನ ನೀಡಿ. ಲೈಟ್ ಹಸಿರು ಬಣ್ಣದಲ್ಲಿದ್ದರೆ ಎಟಿಎಂ ಸುರಕ್ಷಿತವಾಗಿದೆ ಎಂದರ್ಥ. ಕೆಂಪು ಅಥವಾ ಯಾವುದೇ ಲೈಟ್ ಬರ್ತಾ ಇಲ್ಲವೆಂದ್ರೆ ಎಟಿಎಂ ಸುರಕ್ಷಿತವಾಗಿಲ್ಲ ಎಂದರ್ಥ.
ನಿಮ್ಮ ಎಟಿಎಂ ಕಾರ್ಡ್ ಬಳಸಲು ಹ್ಯಾಕರ್ಸ್ ಗೆ ಎಟಿಎಂ ಕಾರ್ಡ್ ನಂಬರ್ ಜೊತೆ ಪಾಸ್ವರ್ಡ್ ಬೇಕು. ಎಟಿಎಂ ಕಾರ್ಡ್ ನಂಬರ್ ಹ್ಯಾಕರ್ಸ್ ಯಾವುದೇ ರೂಪದಲ್ಲಿಯಾದ್ರೂ ಪಡೆಯುತ್ತಾರೆ. ಆದ್ರೆ ಪಾಸ್ವರ್ಡ್ ಪಡೆಯೋದು ಕಷ್ಟ. ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಪಿನ್ ಹಾಕುವಾಗ ಇನ್ನೊಂದು ಕೈನಲ್ಲಿ ನಂಬರ್ ಮುಚ್ಚಿಟ್ಟುಕೊಳ್ಳಿ. ಸಿಸಿ ಟಿವಿಯಲ್ಲಿ ನಿಮ್ಮ ಪಾಸ್ವರ್ಡ್ ದಾಖಲಾಗದಂತೆ ನೋಡಿಕೊಳ್ಳಿ.