ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಅವಂತಿಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ನೆಲಸಮ ಮಾಡಿದೆ.
ಸಿಆರ್ಪಿಎಫ್ ನ 130ನೇ ಬೆಟಾಲಿನ್‍ನ 55 ರಾಷ್ಟ್ರೀಯ ರೈಫಲ್(ಆರ್‍ಆರ್) ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್‍ಓಜಿ) ಜಂಟಿ ತಂಡ ಮತ್ತು ಉಗ್ರರ ನಡುವೆ ಬೆಳಗ್ಗಿನ ಜಾವ 2.10ರ ಹೊತ್ತಿಗೆ ಗುಂಡಿನ ಚಕಮಕಿ ಶುರುವಾಗಿತ್ತು. ಈ ದಾಳಿಯಲ್ಲಿ ಒಟ್ಟು ಮೂವರು ಉಗ್ರರು ಗಂಭೀರ ಗಾಯಗೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಈವರೆಗೆ ಕೇವಲ ಇಬ್ಬರು ಉಗ್ರರ ಮೃತದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದೆ.
ಮೃತ ಉಗ್ರರಲ್ಲಿ ಒಬ್ಬನನ್ನು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಶೌಖತ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಇದೇ ಗುರುವಾರದಂದು ಪುಲ್ವಾಮದಲ್ಲಿ ಮೂವರು ಉಗ್ರರನ್ನು ಸೇನೆ ಎನ್‍ಕೌಂಟರ್ ಮಾಡಿ ಹತ್ಯೆಗೈದಿತ್ತು. ಈ ವೇಳೆ ಓರ್ವ ಯೋಧರು ಹಾಗೂ ಓರ್ವ ಸಾರ್ವಜನಿಕ ಕೂಡ ಗುಂಡೇಟಿಗೆ ಹುತಾತ್ಮರಾಗಿದ್ದರು.