ಸುದ್ದಿ

ಕರ್ತವ್ಯಕ್ಕೆ ತೆರಳಿದ ಪತಿಗಾಗಿ 19 ವರ್ಷ ಶಬರಿಯಂತೆ ಕಾಯ್ದ ಪತ್ನಿ…….!

By admin

June 04, 2019

ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ.

1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೇನೆಯವರು ಮೊದಲು ಉತ್ತಯ್ಯ ಮಿಸ್ಸಿಂಗ್ ಎಂದು, ನಂತರ ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಸಾಕ್ಷಿ ಕೊಡಿ ಎಂದು ಪಾರ್ವತಿ ಇದುವರೆಗೂ ಪತಿಗಾಗಿ ಕಾಯುತ್ತಿದ್ದಾರೆ.

ಆಗಸ್ಟ್ 1999ರಂದು, ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್‍ನಲ್ಲಿ ಲಾನ್ಸ್ ನಾಯಕ್ ಆಗಿದ್ದ ಉತ್ತಯ್ಯ ಮನೆಗೆ ಬಂದಿದ್ದರು. 20 ದಿನ ಇದ್ದು ಗರ್ಭಿಣಿ ಪತ್ನಿಗೆ ದೇಶ ಸೇವೆ ಮುಗಿಸಿ ಬೇಗ ಹಿಂದಿರುಗಿ ಬರುತ್ತೇನೆ ಎಂದು ಹೇಳಿ ಅಲಹಾಬಾದ್‍ನ ತನ್ನ ಯುನಿಟ್‍ಗೆ ವಾಪಾಸ್ ಹೋಗಿದ್ದರು. ಬಳಿಕ ನವೆಂಬರ್ 21ರಂದು ಪತ್ನಿಗೆ ಕರೆ ಮಾಡಿ ಹುಷಾರಿಲ್ಲ ಎಂದು ಹೇಳಿದ್ದರು. ಅದೇ ಕಡೆಯ ಕರೆ, ಆ ನಂತರ ಮತ್ತೆ ಕರೆಯೇ ಬರದಿರೋದ್ರಿಂದ ಆತಂಕಕ್ಕೀಡಾದ ಕುಟುಂಬಕ್ಕೆ ಡಿಸೆಂಬರ್ 4ಕ್ಕೆ ಒಂದು ಟೆಲಿಗ್ರಾಂ ಬಂತು. ಕಡೆಗೂ ಪತಿಯಿಂದ ಟೆಲಿಗ್ರಾಂ ಬಂತು ಎಂದುಕೊಂಡಿದ್ದ ಪತ್ನಿಗೆ ದೊಡ್ಡ ಆಘಾತವೇ ಕಾದಿತ್ತು.

ಆ ಟೆಲಿಗ್ರಾಂನಲ್ಲಿ ಉತ್ತಯ್ಯ ಸೈನ್ಯದ ಯುನಿಟ್‍ನಲ್ಲಿಲ್ಲ ಊರಲ್ಲಿದ್ರೆ ಕಳುಹಿಸಿಕೊಡಿ ಎಂದು ಬರೆಯಲಾಗಿತ್ತು. ಆ ಸುದ್ದಿ ಕೇಳಿ ಶಾಕ್‍ಗೆ ಒಳಗಾದ ಯೋಧ ಉತ್ತಯ್ಯನ ಗರ್ಭಿಣಿ ಪತ್ನಿಗೆ ಡೆಲಿವರಿಯಾಗಿ ಮಗು ಕೂಡ ಸಾವನ್ನಪ್ಪಿತ್ತು. ದಿನ ಕಳೆದಂತೆ ಸುಧಾರಿಸಿಕೊಂಡು ಪತಿಗಾಗಿ ಹುಡುಕಾಟ ನಡೆಸಿ ಸೈನ್ಯದ ಯುನಿಟ್‍ಗೂ ಹೋಗಿ ಬಂದರೂ ಪತಿಯ ಸುಳಿವೇ ಸಿಗಲಿಲ್ಲ. ಕಡೆಗೆ ಸೇನೆ ಜೂನ್ 14ಕ್ಕೆ ಉತ್ತಯ್ಯ ನಿಧನರಾಗಿದ್ದಾರೆ ಎಂದು ಪತ್ರ ಕಳುಹಿಸಿದ್ದರು.

ಪತ್ರ ಕಳುಹಿಸಿದ ನಂತರ 2010ರಿಂದ ಯೋಧನ ಪತ್ನಿಗೆ ಪಿಂಚಣಿ ಕೊಡುವುದಕ್ಕೆ ಶುರು ಮಾಡಿದ ಸರ್ಕಾರ ಮೃತದೇಹವಾಗಲಿ, ಎಲ್ಲಿ, ಹೇಗೆ ನಿಧನರಾದರು ಎಂದಾಗಲೀ ಯೋಧನ ಕುಟುಂಬಕ್ಕೆ ಮಾಹಿತಿಯೇ ಕೊಟ್ಟಿಲ್ಲ. ಹೀಗಾದರೆ ಹೇಗೆ ಸೈನ್ಯ ನಂಬಿ ಯೋಧರನ್ನಾಗಿ ದೇಶ ಸೇವೆಗೆ ನಮ್ಮವರನ್ನು ಕಳುಹಿಸೋದು ಎಂದು ಪಾರ್ವತಿ ಹಿತೈಷಿಗಳು ಪ್ರಶ್ನಿಸುತ್ತಿದ್ದಾರೆ.