ಸುದ್ದಿ

ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದ ಬಂಟ್ವಾಳ ರೈತ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರ ಪ್ರಶಂಸೆ…!

By admin

June 20, 2019

ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ.

ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈಗ ಯಂತ್ರಕ್ಕೆ ದೇಶ ಹಾಗೂ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ.

ಈಗ ಮರ ಹತ್ತಿ ಕೆಲಸ ಮಾಡಲು ನುರಿತ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ಕರಾವಳಿಯ ಅಡಕೆ ಬೆಳೆಗಾರರ ಅಳಲು. ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇವೆ. ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯನ್ನು ಗಣಪತಿ ಭಟ್ ಹಾಕಿಕೊಂಡಿದ್ದಾರೆ.

ಬೈಕ್ ಮಾದರಿ ಯಂತ್ರ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದೆ. ಇದನ್ನು ಗಮನಿಸಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರದ ಉತ್ಪಾದನೆ ಹಕ್ಕನ್ನು ಪಡೆಯಲು ಉತ್ಸುಕರಾಗಿದ್ದಾರೆ. ಮಹೀಂದ್ರಾ ಮಾತ್ರವಲ್ಲ, ನಾನು ಯಾವುದೇ ಕಂಪನಿಗೆ ಈ ಯಂತ್ರದ ಉತ್ಪಾದನೆ ಹಕ್ಕು ನೀಡಲು ಸಿದ್ಧನಿಲ್ಲ. ನಾನೇ ಉತ್ಪಾದಿಸಿ ರೈತರಿಗೆ ತಲುಪಿಸುತ್ತೇನೆ. ಅದಕ್ಕಾಗಿ ಪ್ರತ್ಯೇಕ ತಂಡ ರೂಪಿಸುತ್ತೇನೆ ಎಂದು ತಿಳಿಸಿದ್ದಾರೆ. ಅಡಕೆ ಮರ ಏರುವ ಯಂತ್ರಕ್ಕೆ ಜಿಲ್ಲೆ, ಹೊರ ಜಿಲ್ಲೆಗಳು ಸೇರಿದಂತೆ ಕೇರಳದಿಂದಲೂ ಬೇಡಿಕೆ ಬರುತ್ತಿದೆ. ಪ್ರತಿ ಯಂತ್ರಕ್ಕೆ 75 ಸಾವಿರ ರು ದರ ನಿಗದಿ ಪಡಿಸಿದ್ದಾರೆ, ಇದಕ್ಕಾಗಿ ಬಿಸಿ ರೋಡ್ ನಲ್ಲಿ ಶಾಪ್ ಕೂಡ ತೆರದಿದ್ದಾರೆ.