KOLAR NEWS PAPER

ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

By KOLAR NEWS CHANDRU

January 03, 2023

ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು ಪ್ರಯತ್ನಿಸಿರುವುದು ಸರಿಯಲ್ಲ ಎಂದರು. ಮಣ್ಣಿನ ಮಕ್ಕಳ ಜೀವನಾಡಿ ಗ್ರಾಮೀಣ ಪ್ರದೇಶದ ರೈತರ ಸ್ವಾಭಿಮಾನ ಕೊಟ್ಟಿರುವಂತಹ ಕೆಎಂಎಫ್ ನಂದಿನಿಯನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಮಾಡುವ ಹೇಳಿಕೆ ನೀಡಿರುವ ರಾಜಕಾರಣಿಗಳು ಎಷ್ಟು ಜನ ಹೈನೋದ್ಯಮದಲ್ಲಿ ತೊಡಗಿ ಹಸುವಿನ ಗಂಜಲ, ಸಗಣಿಯನ್ನು ಎತ್ತಿ ದುಬಾರಿಯಾಗಿರುವ ಪಶು ಆಹಾರದ ನಡುವೆ ಕಷ್ಟಪಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಪ್ರತಿನಿತ್ಯ 85 ಲಕ್ಷಕ್ಕೂ ಅಧಿಕ ಹಾಲನ್ನು ಶೇಖರಿಸುತ್ತದೆ. 2024-25ರ ವೇಳೆಗೆ ಪ್ರತಿನಿತ್ಯ 135.53 ಲಕ್ಷ ಲೀಟರ್ ಸಂಗ್ರಹಿಸುವ ಗುರಿಯನ್ನು ಹೊಂದಿದೆ. 8 ಲಕ್ಷಕ್ಕೂ ಹೆಚ್ಚಿನ ರಾಸುಗಳನ್ನು ಗುಂಪುವಿಮೆಗೆ ಒಳಪಡಿಸುವುದು ನಂದಿನಿಯ ಹೆಚ್ಚುಗಾರಿಕೆಯೂ ಆಗಿದೆ ಎಂದು ಹೇಳಿದರು. ಪ್ರತಿನಿತ್ಯ ರೈತರಿಗೆ 30 ಕೋಟಿರೂ ಅಧಿಕ ಹಣವನ್ನು ಪಾವತಿ ಮಾಡುತ್ತಿರುವುದಲ್ಲದೆ 170ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳನ್ನು ಕೆಎಂಎಫ್ ಉತ್ಪಾದಿಸುತ್ತಿರುವುದು ಉಲ್ಲೇಖಾರ್ಹ. ವಿದೇಶಗಳಿಗೂ ಕೆನೆರಹಿತ ಹಾಲಿನ ಫೌಡರ್, ಗಡಿ ಭಾಗಕ್ಕೆ ಗುಡ್‌ಲೈಫ್ ಉತ್ಪನ್ನಗಳನ್ನು ರವಾನಿಸುವಲ್ಲೂ ಯಶಸ್ವಿಯಾಗಿದೆ. ಪ್ರಸ್ತುತ ಅಮುಲ್ ಅಧಿಪತ್ಯ ಹೊಂದಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಹಾಲಿನ ಇಳುವರಿ ಗಣನೀಯವಾಗಿ ಇಳಿಕೆ ಕಂಡಿದೆ. ಇಂತಹ ಸಂದರ್ಭದಲ್ಲಿ ತಮ್ಮದೇ ಅಸ್ತಿತ್ವ ಹೊಂದಿರುವ ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನ ಮಾಡುವ ಸೂಚನೆಯನ್ನು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಕರ್ನಾಟಕ ಹೈನೋದ್ಯಮದ ಕೊನೆಯ ಮೊಳೆ ಹೊಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.