ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ.
ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು.
ಈ ಮಾರ್ಗಸೂಚಿಗಳನ್ನು ಇಲಾಖೆಯ ತಜ್ಞರ ಸಮಿತಿಯಲ್ಲಿಟ್ಟು ಪರಿಶೀಲಿಸಿ, ನಂತರ ಇಲಾಖೆಯ ಆಯುಕ್ತರ ಅನುಮೋದನೆ ಪಡೆದು ಸುತ್ತೋಲೆ ಹೊರಡಿಸಬೇಕಿತ್ತು. ಆದರೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ ಕೆ.ಎಸ್.ಮಣಿ ಅವರು, ಖಾಸಗಿ ಸಂಸ್ಥೆಯ ಮಾರ್ಗದರ್ಶಿಗಳನ್ನು 2019ರ ಅ.28ರಂದು ಯಥಾವತ್ ಅನುಮೋದನೆ ನೀಡಿ, ನ.6ರಂದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದರು.
‘ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ಸುತ್ತೋಲೆ ಹೊರಡಿಸಿ ಸಂವಿಧಾನ ಕರ್ತೃಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ನಗರ ಪೊಲೀಸ್ ಕಮಿಷನರ್ ಅವರಿಗೆ ಭಾರತೀಯ ಸಂವಿಧಾನ ರಕ್ಷಣಾ ಸಮಿತಿ ದೂರು ನೀಡಿದೆ.