ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ವಿಧಿವಶರಾಗಿ ಈಗಾಗಲೇ ಹತ್ತು ದಿನಗಳು ಕಳೆದಿದ್ದು, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಮಾತ್ರ ಈ ವಿಷಯ ಶನಿವಾರ ತಿಳಿದಿದೆ.ಈ ವೇಳೆ ಸೋನು ಪಾಟೀಲ್ ಅಂಬರೀಶ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹೊರ ಜಗತ್ತಿನ ಯಾವುದೇ ಸಂಪರ್ಕವಿರದ ಕಾರಣ, ನವೆಂಬರ್ 24ರ ಶನಿವಾರದಂದು ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದರೂ ವಾರದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿದೆ.
ಭಾನುವಾರದ ಸಂಚಿಕೆಯಲ್ಲಿ ದಿವಂಗತ ಅಂಬರೀಶ್ ಅವರಿಗೆ ಬಿಗ್‍ಬಾಸ್ ಸ್ಪರ್ಧಿಗಳು ಹಾಡುಗಳನ್ನು ಹೇಳುವ ಮೂಲಕ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದರು. ಈ ವೇಳೆ ಸ್ಪರ್ಧಿಗಳು ಅಂಬರೀಶ್ ಬಗ್ಗೆ ತನ್ನ ಅನಿಸಿಕೆಗಳನ್ನು ಹೇಳಿಕೊಂಡಿದ್ದರು.
ಸೋನು ಪಾಟೀಲ್ ಮಾತನಾಡಿ, ಈಗಾಗಲೇ ನಾನು ಬೆಂಗಳೂರಿಗೆ ಬಂದು ತುಂಬಾ ಕಷ್ಟ ಪಟ್ಟಿದ್ದೀನಿ ಅಂತ ನಿಮೆಲ್ಲರಿಗೂ ಗೊತ್ತಿದೆ. ನಾನು ಬೆಂಗಳೂರಿಗೆ ಬಂದು ಅಂಬರೀಶ್ ಅವರ ಮನೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ್ದೇನೆ. ನಾನು ನಗರಕ್ಕೆ ಬಂದಾಗ ಹಣ ಮತ್ತು ತಿನ್ನಲೂ ಊಟವೂ ಇರಲಿಲ್ಲ. ಕೆಲಸಕ್ಕಾಗಿ ಅಲೆದಾಡುತ್ತಿದ್ದೆ. ಆಗ ಜೆ.ಪಿ ನಗರದಲ್ಲಿ ಯಾವುದೋ ಕೆಲಸ ಇದೆ ಎಂದು ಹೇಳಿದಾಗ ನಾನು ಅಲ್ಲಿಗೆ ಹೋದೆ.
ನಮ್ಮ ತಾಯಿ ಅಂಬರೀಶ್ ಅವರ ಅಭಿಮಾನಿ. ಆದ್ದರಿಂದ ನಾನು ಒಮ್ಮೆ ಅಂಬರೀಶ್ ಅವರನ್ನು ಭೇಟಿ ಮಾಡಬೇಕು ಎಂದು ಅವರ ಮನೆಗೆ ಹೋಗಿದ್ದೆ. ನಾವು ಉತ್ತರ ಕರ್ನಾಟಕದವರು, ನಮ್ಮ ತಂದೆ ಒಬ್ಬ ರೈತರು, ಈಗ ಅವರಿಗೆ ಹೃದಯ ಕಸಿಮಾಡಿಸಬೇಕು ಎಂದು ಹೇಳಿಕೊಂಡೆ. ನಾನು ಉತ್ತರ ಕರ್ನಾಟಕ ಎಂದಾಕ್ಷಣ, ಅವರು ನೀವು ಕಲಾವಿದರಿಗೆ ಬಹಳ ಗೌರವ ಕೊಡುತ್ತೀರಿ. ನಿಮ್ಮನ್ನು ಗೌರವಿಸಬೇಕಾದುದ್ದು ನಮ್ಮ ಕರ್ತವ್ಯ ಎಂದು ಕೂರಿಸಿಕೊಂಡು ಮಾತನಾಡಿಸಿದರು ಅಂತ ಸೋನು ಹೇಳಿಕೊಂಡಿದ್ದಾರೆ.
ಅವರು ನೀನು ಊಟ ಮಾಡಿ ಬಹಳ ದಿನವಾಗಿದೆ ಅನ್ನಿಸುತ್ತಿದೆ, ಊಟ ಮಾಡು ಎಂದು ಹೇಳಿದರು. ನಿಜ ಹೇಳಬೇಕು ಅಂದರೆ ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿತ್ತು. ಕೊನೆಗೆ ಅವರ ಪಕ್ಕದಲ್ಲಿಯೇ ಕೂರಿಸಿಕೊಂಡು ಊಟ ಹಾಕಿದರು. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ತುಂಬಾ ಹೊಟ್ಟೆ ಹಸಿವಾದಾಗ ನನಗೆ ಊಟ ಹಾಕಿದ ಮೊದಲ ವ್ಯಕ್ತಿ ಅವರಾಗಿದ್ದಾರೆ.
ಇಂದು ಅವರು ನಮ್ಮ ಮಧ್ಯೆ ಇಲ್ಲ. ಆದರೆ ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ. ಮತ್ತೆ ಈ ಕನ್ನಡನಾಡಿನಲ್ಲಿ ಹುಟ್ಟಿ ಬರಬೇಕು ಎಂದು ಅಂಬಿ ಜೊತೆಗಿನ ಕ್ಷಣವನ್ನು ಹೇಳಿಕೊಂಡು ಸೋನು ಪಾಟೀಲ್ ಕಣ್ಣೀರು ಹಾಕಿದರು.