ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್ ಮತ್ತು ವೊಡಾಫೋನ್ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್ ಬಿಲ್ ಶಾಕ್ ತಟ್ಟಲಿದೆ. ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್ ಕಂಪನಿಗಳು ಡಿಸೆಂಬರ್ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ.
ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರ ಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್‌ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ ಬಿಎಸ್‌ಎನ್‌ಎಲ್ ಹೊರತುಪಡಿಸಿ ಬೇರೆ ಕಂಪೆನಿಗಳು ಪೈಪೋಟಿಯಲ್ಲಿಲ್ಲ.
ನಷ್ಟವನ್ನು ಸರಿದೂಗಿಸಲು ದರ ಏರಿಕೆಯ ಅನಿವಾರ್ಯತೆಗೆ ಈ ಕಂಪೆನಿಗಳು ಮುಂದಾಗಿವೆ. ವಿವಿಧ ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದ ಕಂಪೆನಿಗಳು ಅವುಗಳಿಗೆ ಶುಲ್ಕ ವಿಧಿಸಲು ಮುಂದಾಗಿವೆ ಹಾಗೂ ಇತರೆ ಸೇವಾ ಶುಲ್ಕಗಳ ಮೇಲೆಯೂ ಹೆಚ್ಚುವರಿ ಹೊರೆ ನೀಡಿವೆ.
ಡಿಸೆಂಬರ್ 1ರಿಂದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳ ಸೇವೆಗಳ ದರ ಏರಿಕೆಯಾಗಲಿದೆ. ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಎರಡೂ ಗ್ರಾಹಕರಿಗೆ ಈ ದರ ಹೆಚ್ಚಳದ ಬಿಸಿ ತಟ್ಟಲಿದೆ. ಸೇವೆಗಳ ಮೇಲೆ ಸ್ವಲ್ಪ ಮಟ್ಟಿನ ಹೆಚ್ಚಳ ಮಾಡುವುದಾಗಿ ಸಂಸ್ಥೆಗಳು ತಿಳಿಸಿವೆ. ಜಿಯೋ ಇತರೆ ಸೇವಾದಾರರ ಗ್ರಾಹಕರಿಗೆ ಮಾಡುವ ಕರೆಗಳ ಮೇಲೆ ನಿಮಿಷಕ್ಕೆ ಆರು ಪೈಸೆಗಳ ದರ ವಿಧಿಸುವ ನಿರ್ಧಾರವನ್ನು ಇತ್ತೀಚೆಗೆ ತೆಗೆದುಕೊಂಡಿತ್ತು.