ಸುದ್ದಿ

ಮದುವೆಯಾಗೋಲ್ಲ ಎಂದ ಪ್ರಿಯತಮನ ವಿರುದ್ಧ ಕ್ರೂರವಾಗಿ ಸೇಡು ತೀರಿಸಿಕೊಂಡ ಯುವತಿ…!

By admin

June 17, 2019

ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು.

ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್​ 11ರಂದು ಬೈಕ್​ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್​ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್​ ಎರಚಿದ್ದಾಳೆ. ಯುವಕನ ಮುಖ ಪೂರ್ತಿಯಾಗಿ ಸುಟ್ಟುಹೋಗಿದೆ. ಅಲ್ಲದೆ ಈ ಹುಡುಗಿಯ ಕೈಯ್ಯಿಗೂ ಸುಟ್ಟಗಾಯಗಳಾಗಿವೆ.

ಅದಾದ ಬಳಿಕ ಸ್ಥಳದಲ್ಲಿ ಇದ್ದವರು ಯಾರೋ ಪೊಲೀಸರಿಗೆ ಕರೆ ಮಾಡಿ, ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಆ್ಯಸಿಡ್​ ದಾಳಿಯಾಗಿದೆ ಎಂದು ವಿಷಯ ತಿಳಿಸಿದ್ದಾರೆ. ಪೊಲೀಸರು ಕೂಡ ಮೊದಲು ಬೇರೆ ಯಾರೋ ಇವರಿಬ್ಬರ ಮೇಲೆ ಆ್ಯಸಿಡ್​ ಹಾಕಿದ್ದಾರೆ ಎಂದುಕೊಂಡಿದ್ದರು.

ಆದರೆ ಆ ಯುವಕ ತನ್ನ ಬಳಿ ಯುವತಿ ಹೆಲ್ಮೆಟ್​ ತೆಗೆಯುವಂತೆ ಹೇಳಿದ್ದಳು ಎಂದು ಹೇಳಿಕೆ ನೀಡಿದ ಬಳಿಕ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಂತರ ಆ ಯುವತಿ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪರ್ಸ್​ನಲ್ಲಿ ಆ್ಯಸಿಡ್​ ಬಾಟಲಿಯನ್ನು ಅಡಗಿಸಿ ಇಟ್ಟುಕೊಂಡು ಯುವಕನ ಮುಖಕ್ಕೆ ಎರಚಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.