ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ ಸಂಭ್ರಮದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಲಖಿಸರೈನಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮದುವೆ ಸಮಾರಂಭದ ಸ್ಥಳಕ್ಕೆ ನುಗ್ಗಿದ್ದು, 8 ಮಂದಿಯನ್ನು ಬಲಿಪಡೆದಿದೆ
ತಡರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ 8 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಲಖಿಸರೈನ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮೂವರು ವರನ ಕಡೆಯವರು ಮತ್ತು ಐವರು ವಧುವಿನ ಕಡೆಯವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಮೃತಪಟ್ಟವರನ್ನು ಮಂಜೀತ್ ಕುಮಾರ್, ನಕಾತ್ ಮಾಂಜಿ, ಮುಸ್ಕನ್ ಕುಮಾರಿ, ಉಮೇಶ್ ಮಾಂಜಿ, ರಾಜೀವ್ ಮಾಂಜಿ, ಧನರಾಜ್ ಮಾಂಜಿ, ಶಂಭು ಮಾಂಜಿ ಮತ್ತು ಗೋರ್ ಮಾಂಜಿ ಎಂದು ಗುರುತಿಸಲಾಗಿದೆ. ಹಾಗೆಯೇ ಕರುಕು ಮಾಂಜಿ, ಸಾನು ಮಾಂಜಿ, ರಿತಿಕ್ ಮಾಂಜಿ, ಕಾರ್ಪುರಿ ಮಾಂಜಿ, ಮಾಟ್ರು ಮಾಂಜಿ ಸೇರಿದಂತೆ ಗಾಯಗೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸ್‍ಪಿ ಮನೀಶ್ ಕುಮಾರ್, ಎಸ್‍ಡಿಎಂ ಮುರ್ಲಿ ಪ್ರಸಾದ್ ಸಿಂಗ್ ಹಾಗೂ ಇತರೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.