ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿಯಲ್ಲಿ ಪುಕ್ಸಟ್ಟೆ ನಾಯಕನಾಗಲು ಮಂಜು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ಕಾರ್ಯಕರ್ತನ ಬಳಿ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾಗಿದೆ.
ಹಾಸನದಲ್ಲಿ ಬಳ್ಳಾರಿ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ. 10 ವರ್ಷದ ಹಿಂದೆ ಮಾಡಿರುವುದನ್ನು ಜನ ಮರೆತಿರಬಹುದು. 7 ತಿಂಗಳ ಹಿಂದೆ ಸಚಿವರಾಗಿ ಮಾಡಿದ ಅವಾಂತರ ಮರೀತಾರಾ ಎಂದು ಮಂಜು ಕುರಿತಾಗಿ ಮಾತನಾಡಲಾಗಿದೆ.
ಮಂಜು ಅವರ ಬಗ್ಗೆ ಜನ ಮರೆತಿಲ್ಲ. ಹೀಗಾಗಿ ವೋಟುಗಳು ಜೆಡಿಎಸ್ ಪಕ್ಷಕ್ಕೆ ಹೋಗುತ್ತವೆ. ವೋಟ್ ಬಂದರೆ ಮಂಜು ನಾನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಸೋತರೆ ಮತ್ತೆ ಸಿದ್ದರಾಮಯ್ಯ ಬಳಿಗೆ ಓಡಿ ಹೋಗುತ್ತಾರೆ ಎಂದೆಲ್ಲಾ ಬಿಜೆಪಿ ಕಾರ್ಯಕರ್ತ ಮತ್ತು ಶಾಸಕ ಪ್ರೀತಂಗೌಡ ಅವರ ನಡುವೆ ಸಂಭಾಷಣೆ ನಡೆದಿದ್ದು, ಆಡಿಯೋ ವೈರಲ್ ಆಗಿದೆ.
ಆದರೆ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೀತಂ ಗೌಡ ನಕಲಿ ಆಡಿಯೋ ಇದಾಗಿದೆ ಎಂದು ಹೇಳಿದ್ದಾರೆ. ಹಾಸನ ಜಿಲ್ಲೆಯ ಬಹುತೇಕ ಕಡೆ ಬಿಜೆಪಿ ಪ್ರಬಲವಾಗಿದೆ. ಜೆಡಿಎಸ್ ನವರು ಇಂತಹ ನಕಲಿ ಆಡಿಯೋ ಬಿಟ್ಟಿರಬಹುದು ಎಂದು ಹೇಳಿದ್ದಾರೆ.