ಬಹುತೇಕರು ಈಗಂತೂ ಕಂಪ್ಯೂಟರ್ನ ಮುಂದೆ ಕುಳಿತು ಬಿಟ್ಟರೆ ಎಲ್ಲವನ್ನೂ ಮರೆತು ಬಿಡುತ್ತಾರೆ.
ಕಂಪ್ಯೂಟರ್ನ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ದೇಹ ದುರ್ಬಲವಾಗುತ್ತದೆ.
ಇದರಿಂದ ಆಗುವ ಪರಿಣಾಮಗಳಿಂದ ತಪ್ಪಿಸಿ ಕೊಳ್ಳಲು ಕೆಳಗೆ ಕೊಟ್ಟಿರುವ ಕೆಲುವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ :-
- ತಾಸುಗಟ್ಟಲೆ ಕಂಪ್ಯೂಟರ್ ಪರದೆಯನ್ನು ನೋಡಿ ಕೆಲಸ ಮಾಡುವಾಗ ಅದರ ಮಧ್ಯೆ ಅಂದರೆ ಪ್ರತಿ ಅರ್ಧ ಗಂಟೆಗೊಮ್ಮೆ ಸ್ವಲ್ಪ ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳಿ.
- ಸುಮಾರು ಎರಡು ನಿಮಿಷಗಳ ಕಾಲ ನಡೆದಾಡಿ ಭುಜಗಳನ್ನು ಕೈಗಳಲ್ಲಿ ಹಿಡಿದುಕೊಂಡು ಮೇಲೆ ಕೆಳಗೆ ಮಾಡಿ. ಈ ರೀತಿ 30 ಸೆಕೆಂಡುಗಳ ಕಾಲ ಮಾಡಿದರೆ ಕೈಗಳಿಗೆ ಸಾಕಷ್ಟು ವ್ಯಾಯಾಮ ಸಿಗುತ್ತದೆ.
- ಇದೇ ರೀತಿ ಕಂಪ್ಯೂಟರ್ನ ಮುಂದೆ ಕುಳಿತುಕೊಳ್ಳುವಾಗ ನಿಮ್ಮ ತಲೆಯನ್ನು ನೇರವಾಗಿ ಇರಿಸಿಕೊಳ್ಳಿ. ತಲೆಯನ್ನು ಬಾಗಿಸಿ ಅಥವಾ ಭುಜಗಳಿಗೆ ಓರೆಯಾಗಿ ಇರಿಸಿ ಕೆಲಸ ಮಾಡಬೇಡಿ.
- ಗದ್ದವನ್ನು 5 ಸೆಕೆಂಡುಗಳ ಕಾಲ ಮೇಲೆ ಕೆಳಗೆ ಮಾಡಿ. ಇದನ್ನು ದಿನದಲ್ಲಿ 10 ಬಾರಿ ಮಾಡಿದರೆ ಕುತ್ತಿಗೆಯ ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ.
- ನೀವು ಕುಳಿತುಕೊಳ್ಳುವ ಕುರ್ಚಿಯ ಮೇಲೆ ಕುಷನ್ ಅಥವಾ ದಿಂಬನ್ನು ಇಡಿ. ಇದರಿಂದ ಬೆನ್ನು ಹುರಿ ನೆಟ್ಟಗಿರುತ್ತದೆ ಮತ್ತು ಬೆನ್ನು ನೋವು ಬರುವುದಿಲ್ಲ.
- ದೇಹದಲ್ಲಿ ಸೂಕ್ತವಾದ ರಕ್ತ ಪರಿಚಲನೆಗೆ ಕಾಲುಗಳ ಪಾತ್ರ ಮುಖ್ಯವಾದುದು. ಆದ್ದರಿಂದ ಕಾಲುಗಳಿಗೂ ಸೂಕ್ತ ವ್ಯಾಯಾಮ ಅತ್ಯಗತ್ಯ. ಪಾದದ ಅಡಿಭಾಗವನ್ನು ಪೂರ್ತಿಯಾಗಿ ನೆಲಗಳಿಗೆ ಸ್ಪರ್ಶಿಸಿ. ಬಳಿಕ ಅದನ್ನು ವೃತ್ತಾಕಾರವಾಗಿ ತಿರುಗಿಸಿ.
- ದಿನವಿಡೀ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ. ಮಂಡಿಗಳನ್ನು ತೊಡೆಗಳಿಗೆ ಸಮನಾಗುವಂತೆ ಅಗಲವಾಗಿಡಿ ಅಥವಾ ತೊಡೆಗಳ ಕೆಳಗೆ ಇಡಿ. ಆಗ ಪಾದಗಳು ನೆಲಕ್ಕೆ ಸ್ಪರ್ಶಿಸುತ್ತವೆ.
- ಎತ್ತರ ಹಿಮ್ಮಡಿಯಿರುವ ಪಾದರಕ್ಷೆಗಳನ್ನು ಧರಿಸುವವರು ಕೆಲಸದ ಮಧ್ಯೆ ಆಗಾಗ ಪಾದರಕ್ಷೆ ಇಲ್ಲದೆ ನಡೆಯಬೇಕು. ಇದರಿಂದ ಕಾಲುಗಳಿಗೆ ರಕ್ತ ಪರಿಚಲನೆ ಸುಗಮಗೊಳ್ಳುವುದು ಮಾತ್ರವಲ್ಲದೆ, ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ.