ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.
‘ಕಳೆದ ಮೂರು ವರ್ಷಗಳ ಅಂತರದಲ್ಲಿ 30ಕ್ಕೂ ಹೆಚ್ಚು ಬಾರಿ ನನಗೆ ಹಾವು ಕಚ್ಚಿದೆ. ನಾನು ಹಾವು ಕಂಡ ತಕ್ಷಣ ಅದರ ಜತೆ ಆಟವಾಡಲು ಆರಂಭಿಸುತ್ತೇನೆ. ತಕ್ಷಣ ಹಾವು ನನಗೆ ಕಚ್ಚುತ್ತದೆ. ನಾನು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಹಲವು ಹಾವುಗಳು ನನಗೆ ಕಚ್ಚಿವೆ. ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಬಾರಿ ಹಾವುಗಳೂ ಕಚ್ಚಿದ್ದಿದೆ.
ಜ್ಯೋತಿಷಿಗಳು ನನಗೆ ದೇವರ ಜತೆ ಸಂಬಂಧ ಇದೆ ಎನ್ನುತ್ತಾರೆ,’ ಎಂದು ಹೇಳುತ್ತಾಳೆ ಯುವತಿ. ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲೆಗಳ ಪ್ರಕಾರ ಇದೇ ಫೆಬ್ರವರಿ 18ಕ್ಕೆ ಆಕೆ 34ನೇ ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾಳೆ. ಆದರೆ ಇದಕ್ಕೆ ವೈದ್ಯರು ಹೇಳುವುದೇ ಬೇರೆ. ಹಲವು ಬಾರಿ ವಿಷವಿಲ್ಲದ ಹಾವುಗಳು ಆಕೆಗೆ ಕಚ್ಚಿವೆ.
ಕೆಲವೊಮ್ಮೆ ವಿಷ ಕಡಿಮೆ ಇರುವ ಹಾವುಗಳು ಕಚ್ಚಿದ್ದರಿಂದ ಇವಳಿಗೆ ಏನೂ ಆಗಿಲ್ಲ ಎನ್ನುತ್ತಾರೆ. ಒಟ್ಟಾರೆ ಯುವತಿ ಮಾತ್ರ ಇನ್ನೂ ಬದುಕಿದ್ದಾಳೆ.
ವೈದ್ಯಕೀಯ ದಾಖಲೆಗಳ ಪ್ರಕಾರ ಆಕೆಗೆ 34 ಬಾರಿ ಹಾವು ಕಚ್ಚಿದ್ದಂತೂ ನೂರಕ್ಕೆ ನೂರು ಸತ್ಯ. ಇನ್ನು ಕೆಲವರು ನಿರಂತರವಾಗಿ ಹಾವು ಕಚ್ಚುತ್ತಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಉತ್ಪತ್ತಿಯಾಗಿ ಮುಂದಿನ ಬಾರಿ ಕಚ್ಚಿದಾಗ ಏನೂ ಆಗದಂತೆ ತಡೆಯುತ್ತದೆ. ಇದರಿಂದ ಆಕೆಗೆ ಏನೂ ಆಗುತ್ತಿಲ್ಲ ಎನ್ನುತ್ತಿದ್ದಾರೆ.