ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ವಿದ್ಯುತ್ ಖೋತಾ ಮಾಡಿದಲ್ಲಿ 2019ರ ಏಪ್ರಿಲ್ ನಿಂದ ವಿತರಕರಿಗೇ ದಂಡ ಹಾಕಲಾಗುತ್ತದೆ. ಅಷ್ಟೇ ಅಲ್ಲ ವಿದ್ಯುತ್ ಕಳವು ತಡೆಯಲು ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲು ಚಿಂತನೆ ನಡೆದಿದೆ.
2018ರ ಅಂತ್ಯದ ವೇಳೆಗೆ ಸರ್ವರಿಗೂ ವಿದ್ಯುತ್ ಪೂರೈಸಲು 16,000 ಕೋಟಿ ರೂ. ವೆಚ್ಚದಲ್ಲಿ ಸೌಭಾಗ್ಯ ಸ್ಕೀಮ್ ಅನ್ನು ಕೂಡ ಲಾಂಚ್ ಮಾಡಲಾಗಿತ್ತು. 2019ರ ಮಾರ್ಚ್ ವೇಳೆಗೆ ದೇಶಾದ್ಯಂತ ದಿನದ 24 ಗಂಟೆಯೂ ವಿದ್ಯುತ್ ನೀಡುವುದು ನಮ್ಮ ಉದ್ದೇಶ. ಮಾರ್ಚ್ ಬಳಿಕ ವಿನಾಕಾರಣ ಲೋಡ್ ಶೆಡ್ಡಿಂಗ್ ಮಾಡಿದ್ರೆ ವಿತರಕರಿಗೆ ದಂಡ ಹಾಕುವುದಾಗಿ ಇಂಧನ ಸಚಿವ ಆರ್.ಕೆ.ಸಿಂಗ್ ಈ ವಿಷಯವನ್ನು ತಿಳಿಸಿದ್ದಾರೆ.
ತಾಂತ್ರಿಕ ದೋಷ ಅಥವಾ ಪ್ರಕೃತಿ ವಿಕೋಪಗಳ ಕಾರಣಗಳನ್ನು ಹೊರತುಪಡಿಸಿ, ಸುಖಾ ಸುಮ್ಮನೆ ವಿದ್ಯುತ್ ಕಡಿತಗೊಳಿಸಿದರೆ, ವಿದ್ಯುತ್ ಪೂರೈಕೆದಾರರಿಗೆ ದಂಡ ವಿಧಿಸಲಾಗುತ್ತದೆ.ವಿದ್ಯುತ್ ಮೀಟರ್, ಬಿಲ್ ಪಾವತಿ ಎಲ್ಲವನ್ನೂ ಡಿಜಿಟಲೀಕರಣ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಅದಕ್ಕಾಗಿ ಪ್ರಿ ಪೇಯ್ಡ್ ಮೀಟರ್ ಅಳವಡಿಸಲು ಎಲ್ಲಾ ರಾಜ್ಯಗಳು ಇದಕ್ಕೆ ಸಮ್ಮತಿಸಿವೆ. ವಿದ್ಯುತ್ ಪೂರೈಕೆಗೆ ತಕ್ಕಂತೆ ಶುಲ್ಕ ವಸೂಲಿ ಆಗುತ್ತಿಲ್ಲ. ಹಾಗಾಗಿ ಈ ಕ್ರಮ ಅನಿವಾರ್ಯ ಅಂತಾ ಸಚಿವರು ತಿಳಿಸಿದ್ದಾರೆ.
ಪ್ರೀ ಪೇಯ್ಡ್ ಮೀಟರ್ ಅಳವಡಿಕೆ ಹಾಗೂ ಫಲಾನುಭವಿಗಳಿಗೆ ನೇರ ಲಾಭ ವರ್ಗಾಯಿಸಲು ಹಾಗೂ 24×7 ವಿದ್ಯುತ್ ಪೂರೈಸಲು ದೇಶದ ಬಹುತೇಕ ರಾಜ್ಯಗಳು ಒಪ್ಪಿವೆ, ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಮುಂದೆ ಮೀಟರಿಂಗ್, ಬಿಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾನವ ಸಂಪರ್ಕವಿಲ್ಲದಂತೆ ಮಾಡಲಾಗುವುದು. ಮೊಬೈಲ್ ಮೂಲಕವೇ ವಿದ್ಯುತ್ ಬಿಲ್ ಕಟ್ಟುವ ವ್ಯವಸ್ಥೆ ಮಾಡಲಾಗುವುದು. ಆದರೆ, ಈ ಕಾರ್ಯಕ್ಕೆ ಯಾವುದೇ ಕಾಲ ಮಿತಿ ನಿಗದಿಗೊಳಿಸಿಲ್ಲ. ಅಲ್ಲದೇ ಪೂರೈಕೆದಾರರಿಗೆ ಆಗುವ ನಷ್ಟವನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ, ಸಚಿವರು ಭರವಸೆ ನೀಡಿದ್ದಾರೆ.