ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ. ನಿತ್ಯ ಕಷ್ಟಗಳೊಂದಿಗೆ ಸಹವಾಸ ಮಾಡುತ್ತಾ ತಾನು ಅಂದುಕೊಂಡ ಗುರಿಯೆಡೆಗೆ ಯಶಸ್ವಿಯಾಗಿ ಮುಂದೆ ಸಾಗುತ್ತಿದ್ದಾರೆ.
ಆಕೆ ಹೆಸರು ನೀತೂ. ವಯಸ್ಸು 19 ವರ್ಷಗಳು. ಈಕೆಯದ್ದು ಬಡ ಕುಟುಂಬ. ತಂದೆ ಸಂಪಾದಿಸುವ ಅಲ್ಪಸ್ವಲ್ಪ ಆದಾಯದಲ್ಲಿ ಅವರು ಸಂಸಾರ ತೂಗಬೇಕು. ಕೆಲಸ ಇಲ್ಲ ಅಂದರೆ ಕಷ್ಟ. ಇನ್ನು ಆಕೆಯ ಓದಿನ ಸಂಗತಿ? ಆಕೆ 8ನೇ ಕ್ಲಾಸಲ್ಲಿ ಇರಬೇಕಾದರೆ ತಂದೆ ಹೇಳಿದ, ಶಾಲೆ ಬಿಡಬೇಕೆಂದು. ಇದರಿಂದ ನೀತೂ ಶಾಕ್ ಗೆ ಗುರಿಯಾದಳು. ಯಾವುದೇ ಕಾರಣಕ್ಕೂ ಓದು ಬಿಡಬಾರದೆಂದು, ಓದುವುದೆಂದರೆ ನನಗೆ ತುಂಬಾ ಇಷ್ಟವೆಂದು, ದಯವಿಟ್ಟು ಶಾಲೆ ಬಿಡಿಸಬೇಡಿ ಎಂದು ತಂದೆಯನ್ನು ಕೇಳಿಕೊಂಡಳು.
ಆದರೂ ಅವರೇನು ಮಾಡಲು ಸಾಧ್ಯ, ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಅವರದು. ಇದರಿಂದ ತಂದೆ ನೋವನ್ನು ಆಕೆ ಅರ್ಥ ಮಾಡಿಕೊಂಡಳು. ತನ್ನ ಓದಿನ ಭಾರವನ್ನು ತಂದೆ ಮೇಲೆ ಹಾಕಬಾರದು ಎಂದು, ತನ್ನ ಓದಿಗೆ ಆಗುವ ಖರ್ಚನ್ನು ತಾನೇ ಸಂಪಾದಿಸಿಕೊಳ್ಳಬೇಕು ಎಂದುಕೊಂಡಳು. ತಾನಿರುವ ಮನೆಗೆ 5 ಕಿ.ಮೀ ದೂರದಲ್ಲಿ ಇರುವ ಮನೆಗಳಿಗೆ ನಿತ್ಯ ನೀತೂ ಹಾಲನ್ನು ವಿತರಿಸುವ ಕೆಲಸ ಆಯ್ಕೆ ಮಾಡಿಕೊಂಡಳು.
ನಿತ್ಯ ಬೆಳಗ್ಗೆ 4 ಗಂಟೆಗೆ ಏಳುವುದು, ಹಾಲನ್ನು ತೆಗೆದುಕೊಂಡು ಹೋಗಿ ಕಾಲ್ನಡಿಗೆಯಲ್ಲಿ 5 ಕಿ.ಮೀವರೆಗೂ ಓಡಾಡುತ್ತಾ ಹಾಲು ವಿತರಿಸುವುದು, ಮನೆಗೆ ಮರಳಿ ಶಾಲೆಗೆ ಹೋಗುವುದು…ಇದು ಆಕೆ ನಿತ್ಯದ ಕಾಯಕ. ಆ ರೀತಿ ಆಕೆ ತಾನು ಸಂಪಾದಿಸಿದ ಹಣದಿಂದ ಓದಿಕೊಳ್ಳುವುದನ್ನು ಆರಂಭಿಸಿದರು. ಅದರ ಮೇಲೆ ಸ್ವತಃ ಹಾಲು ಮಾರುತ್ತಾರೆ. ಈಗ ಆಕೆ ತಿಂಗಳಿಗೆ ರೂ.12 ಸಾವಿರವರೆಗೂ ಸಂಪಾದಿಸುತ್ತಾಳೆ.