17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 108 ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ಈ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
2000 ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು.
ಹರಿಯಾಣ ನಿವಾಸಿಯಾದ ಮಾನುಷಿ ವೈದ್ಯಕೀಯ ವಿದ್ಯಾರ್ಥಿನಿ. 20ರ ಹರೆಯದ ಈಕೆ ದೆಹಲಿಯ ಸೇಂಟ್ ಥಾಮಸ್ ಸ್ಕೂಲ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. . ಈಕೆಯ ಪೋಷಕರೂ ವೈದ್ಯರು.
ಮಾನುಷಿ ಕೂಚಿಪುಡಿ ನೃತ್ಯ ಪರಿಣಿತೆ. ಅಷ್ಟೇ ಅಲ್ಲ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ನೈರ್ಮ ಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 20 ಗ್ರಾಮಗಳಿಗೆ ಭೇಟಿ ನೀಡಿ, 5000 ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಸ್ಟೆಫಾನಿ ಹಿಲ್ ಮೊದಲ ರನ್ನರ್ ಅಪ್ ಮತ್ತು ಮೆಕ್ಸಿಕೊದ ಆಂಡ್ರಿಯಾ ಮೇಜಾ ದ್ವಿತೀಯ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ. ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಯಾವ ವೃತ್ತಿಗೆ ಹೆಚ್ಚಿನ ಸಂಬಳಕ್ಕೆ ಅರ್ಹ ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಮಾನುಷಿಯವರಲ್ಲಿ ಕೇಳಲಾಗಿತ್ತು. ಸಂಬಳದ ಪ್ರಶ್ನೆ ಅಲ್ಲ ಆದರೆ ಅತೀ ಹೆಚ್ಚು ಗೌರವ ಗಳಿಸುವವಳು ಅಮ್ಮ ಎಂದು ಮಾನುಷಿ ಉತ್ತರಿಸಿದ್ದಾಳೆ.
ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2017 ರಲ್ಲೂ ಮಾನುಷಿ ಗೆದ್ದಿದ್ದಳು. ಚೀನಾ ಸಾನ್ಯಾ ನಗರದಲ್ಲಿ ನಡೆದ ಸಮಾರಂಭದಲ್ಲಿ 2016ರ ಪೋಟೋì ರಿಕೋದ ಸ್ಟೆಫಾನಿ ಡೆಲ್ ವಾಲೆಯಿಂದ ಕಿರೀಟವನ್ನು ಮಾನುಷಿ ಮುಡಿಗೇರಿಸಿಕೊಂಡಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ಕ್ ಮಾಡಿ:https://youtu.be/E8B1c3NpLpc