ಜ್ಯೋತಿಷ್ಯ

15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಒಂದೆ ಕೀ ಬಳಸಿ ಕದ್ದ ಪೋರ……!

By admin

August 01, 2019

ತಾನೇ ಸಿದ್ದಪಡಿಸಿದ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಮೆಕ್ಯಾನಿಕ್ ಒಬ್ಬಾತ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ದ್ವಿಚಕ್ರ ವಾಹನ ಮತ್ತು ಮೊಪೆಡ್‌ಗಳ ಮೆಕ್ಯಾನಿಕ್‌ ಒಬ್ಬಾತ ತಾನೇ ಸಿದ್ದಪಡಿಸಿದ ಒಂದೇ ಒಂದು ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾನೆ. ಕೆಂಪೇಗೌಡ ಲೇಔಟ್‌ನ ನಿವಾಸಿ ನವೀನ್‌ ಅಲಿಯಾಸ್‌ ಡಿಯೋ ನವೀನ್‌ (19) ಸಿಕ್ಕಿ ಬಿದ್ದವ. ಈತನ ಸಹಚರ ಮಾಗಡಿ ಸಮೀಪದ ಕುಣಿಗಾನಹಳ್ಳಿಯ ನಾರಾಯಣ ಅಲಿಯಾಸ್‌ ನಾರಾಯಣನನ್ನು ಕೂಡ ಬಂಧಿಸಲಾಗಿದೆ. 

ಡಿಯೋ ನವೀನ ಸ್ಕೂಟರ್‌ ಮತ್ತು ಮೊಪೆಡ್‌ಗಳನ್ನು ರಿಪೇರಿ ಮಾಡುವುದರಲ್ಲಿ ಪಳಗಿದ ಕೈ. ಸಣ್ಣ ವಯಸ್ಸಿನಲ್ಲೇ ಗ್ಯಾರೇಜಿಗೆ ಸೇರಿ ರಿಪೇರಿ ಕೆಲಸ ಕಲಿತಿದ್ದ ಈತ, ಯಾವುದೇ ಕಂಪನಿಯ ಯಾವುದೇ ಸ್ಕೂಟರ್‌ ಆದರೂ ಕೆಲವೇ ನಿಮಿಷಗಳಲ್ಲಿ ಬಿಚ್ಚಿ ಮತ್ತೆ ಹೊಸದಾಗಿ ಫಿಟ್‌ ಮಾಡುವಷ್ಟು ಕೆಲಸ ಕಲಿತಿದ್ದ. ಬಹುತೇಕ ಕಂಪನಿಯ ದ್ವಿಚಕ್ರ ವಾಹನಗಳ ಲಾಕ್‌ ವ್ಯವಸ್ಥೆಯನ್ನು ಚೆನ್ನಾಗಿ ಅರಿತುಕೊಂಡಿದ್ದ.

ಈ ತಿಳಿವಳಿಕೆಯನ್ನೇ ಕಳ್ಳತನಕ್ಕೆ ಬಳಸಿಕೊಂಡ. ಒಂದು ಕಂಪನಿಯ ಲಾಕ್‌ಗೂ ಮತ್ತೊಂದು ಕಂಪನಿಯ ಲಾಕ್‌ಗೂ ಇರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ತನ್ನ ಮೆಕಾನಿಕ್‌ ವೃತ್ತಿ ಅನುಭವದಿಂದಲೇ ಕಲಿತಿದ್ದ ,ಈತ ಎಲ್ಲಾ ವಾಹನಕ್ಕೂ ಅನ್ವಯವಾಗುವ ನಕಲಿ ಕೀಯನ್ನು ಸಿದ್ದಪಡಿಸಿಕೊಂಡಿದ್ದ. ಇದೇ ಕೀ ಬಳಸಿ ಸಲೀಸಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ. ಮಾಗಡಿಯ ಸ್ನೇಹಿತ ನಾರಾಯಣ ಅಲಿಯಾಸ್‌ ನಾಣಿಯನ್ನು ಕೃತ್ಯಕ್ಕೆ ಜತೆಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಕುರುಬರಹಳ್ಳಿ ಸಮೀಪದ ಸತ್ಯನಾರಾಯಣ ಲೇಔಟ್‌ ನಿವಾಸಿ ಶರತ್‌ ಎನ್ನುವವರು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಆಗಿತ್ತು. ಘಟನಾ ಸ್ಥಳದ ಸುತ್ತ ಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ ಬಳಿಕ ಕೇವಲ 10 ಸೆಕೆಂಡುಗಳಲ್ಲಿ ಸಲೀಸಾಗಿ ನಕಲಿ ಕೀ ಬಳಸಿ ವಾಹನ ಕದ್ದಿದ್ದು ಗೊತ್ತಾಗಿತ್ತು. ಬಳಿಕ ಈತನ ಚಹರೆ ಪತ್ತೆ ಹಚ್ಚಿ ತನಿಖೆ ಮುಂದುವರೆಸಿದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇವರ ಬಂಧನದಿಂದ ಮಹಾಲಕ್ಷ್ಮಿಲೇಔಟ್‌ನ 5 ಪ್ರಕರಣಗಳು ಸೇರಿದಂತೆ ಹನುಮಂತನಗರ, ಬಸವೇಶ್ವರನಗರ, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿ ಲೇಔಟ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 23 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.