ಚಿತ್ರ ನಟ ಹುಚ್ಚ ವೆಂಕಟ್ ತಮ್ಮ ಗುರಿಯನ್ನು ಬಹಿರಂಗ ಮಾಡಿದ್ದಾರೆ. “ನಾನೇ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತೇನೆ. ಈ ದೇಶದ ಪ್ರಧಾನ ಮಂತ್ರಿ ಆಗ್ತೀನಿ” ಎಂದು ಹೇಳಿದ್ದಾರೆ ವೆಂಕಟ್.
ಇಲ್ಲಿ ತಮ್ಮ ಹೊಸ ಚಿತ್ರ ಡಿಕ್ಟೇಟರ್ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯಕ್ಕೆ ಪ್ರವೇಶ ಕೊಡಬೇಕೆಂದು ಆಸೆ ಇದೆ. ಆದರೆ ತಂದೆಯವರು ಈ ಬಗ್ಗೆ ಒಪ್ಪಿಗೆ ನೀಡಿಲ್ಲ ಎಂದು ಅವರು ಹೆಳಿದರು.
ಡಿಕ್ಟೇಟರ್ ಚಿತ್ರದಲ್ಲಿ ನಾನು ಪತ್ರಕರ್ತನಾಗಿ ನಟಿಸುತ್ತಿದ್ದೇನೆ. ಪತ್ರಕರ್ತರ ಕಷ್ಟ ಸುಖಗಳನ್ನು ತೆರೆಯ ಮೇಲಿಡಲಾಗುವುದು. ಚಿತ್ರಕಥೆ ನಿರ್ದೇಶನ, ನಟನೆಯ ಜೊತೆಗೆ ಚಿತ್ರದಲ್ಲಿ ಐದಾರು ಹಾಡುಗಳನ್ನು ನಾನೇ ಹಾಡಿದ್ದೇನೆ ಎಂದು ಅವರು ಹೇಳಿದರು .
ಈ ಹಿನ್ನೆಲೆಯಲ್ಲಿ 5 ವರ್ಷಗಳ ಬಳಿಕ ತಂದೆಯನ್ನು ಒಪ್ಪಿಸಿ, ರಾಜಕೀಯ ಪ್ರವೇಶ ಮಾಡಲಿದ್ದೇನೆ. ನನಗೆ 60 ವರ್ಷ ಆಗುವ ವೇಳೆಗೆ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿದರು.
ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ಜನತೆಗೆ ಮನವಿ ಮಾಡಿದರು ಹುಚ್ಚ ವೆಂಕಟ್. ಹಣ, ಸೀರೆ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು. ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ನನಗೆ ತುಂಬಾ ನೋವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಇರಬೇಕು. ಹಿಂಸಾಚಾರ ಬೇಡ ಎಂದು ಅವರು ಹೇಳಿದರು.