“ನಾಯಿ ಮೊಲೆಯಲ್ಲಿ ಕಂಡುಗ ಹಾಲಿದ್ದರೇನು ಪ್ರಯೋಜನ” ಎಂಬ ಗಾದೆ ಮಾತಿದೆ. ಅದೇ ರೀತಿ ಕತ್ತೆ ಹಾಲಿಗೂ ಅದೇ ರೀತಿ ಹೇಳುವವರೂ ಇದ್ದಾರೆ. ಆದರೆ ಹಸುವಿನ ಹಾಲಿಗಿಂತ ಕತ್ತೆ ಹಾಲೇ ಉತ್ತಮ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಆ ಹಾಲಿನ ಮೇಲೆ ಪ್ರಯೋಗ ಮಾಡಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
‘ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್, ಚಿಕ್ಕೋರ್ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅವರ ಕರೆಂಟ್ ಫಾರ್ಮಾಸೂಟಿಕಲ್ ಡಿಸೈನ್ ಪ್ರಕಾರ, ಜರ್ನಲ್ ಆಫ್ ಫುಡ್ ಸೈನ್ಸ್ ಲೇಖನದಲ್ಲಿ ಕತ್ತೆ ಹಾಲಿನ ಬಗೆಗಿನ ಸಂಗತಿಗಳನ್ನು ಹೊರಹಾಕಿದ್ದಾರೆ.
ಕತ್ತೆ ಹಾಲಿನ ಮೇಲೆ ವಿಜ್ಞಾನಿಗಳು ಮಾಡಿದ ಪ್ರಯೋಗಗಳು ಏನು ಹೇಳುತ್ತಿವೆ ಎಂದರೆ….ಹಸುವಿನ ಹಾಲಿಗಿಂತಲೂ ಕತ್ತೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇರುತ್ತದಂತೆ. ಇನ್ನೊಂದು ಆಸಕ್ತಿಕರವಾದ ಸಂಗತಿ ಎಂದರೆ…ಕತ್ತೆ ಹಾಲು ಹೆಚ್ಚುಕಡಿಮೆ ಮನುಷ್ಯನ ಹಾಲಿನಷ್ಟೇ ಶ್ರೇಷ್ಠವಂತೆ.
ಆದರೆ ಹಸು ಮತ್ತು ಎಮ್ಮೆ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನ ಬೆಲೆ ತುಂಬಾ ದುಬಾರಿ. ಎಷ್ಟು ಎಂದರೆ 15 ಎಂಎಲ್ ಕತ್ತೆ ಹಾಲಿನ ಬೆಲೆ ರೂ.50ರವರೆಗೂ ಇರುತ್ತದೆ. ಅಂದರೆ ಸಾಮಾನ್ಯವಾಗಿ ನಾವು ಕೊಳ್ಳುವ ಲೀಟರ್ ಹಾಲಿನ ಬೆಲೆಗೆ ಸಮ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ ರೂ.3,300ವರೆಗೂ ಇರುತ್ತದೆ. ಇನ್ನು ಕತ್ತೆಗಳು ಹಸು, ಎಮ್ಮೆ ತರಹ ಲೀಟರ್‌ಗಟ್ಟಲೆ ಹಾಲು ಕೊಡಲ್ಲ.
ಒಂದೊಂದು ಕತ್ತೆ ಕೇವಲ 250 ಎಂಎಲ್ ಪ್ರಮಾಣದಲ್ಲಿ ಮಾತ್ರ ಹಾಲು ಕೊಡುತ್ತದೆ. ಅದು ಸಹ ವರ್ಷದಲ್ಲಿ ಕೇವಲ 7 ರಿಂದ 8 ತಿಂಗಳು ಮಾತ್ರ. ಆ ಸಮಯ ಮುಗಿಯಿತು ಎಂದರೆ ಮತ್ತೆ 3 ವರ್ಷ ಕಾಯಬೇಕು. ಆ ಬಳಿಕವಷ್ಟೇ ಕತ್ತೆ ಮರಿಹಾಕಿ ಮತ್ತೆ ಹಾಲು ಕೊಡುತ್ತದೆ.