ಸುದ್ದಿ

ಸೋಲಿನಿಂದ ಬೇಸರಗೊಂಡಿರುವ ಮೊಮ್ಮಗನಿಗೆ ರಾಜಕೀಯ ಪಾಠ ಹೇಳಿಕೊಟ್ಟ ತಾತ:ದೇವೇಗೌಡರು…..!

By admin

June 03, 2019

ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಳ್ಳುವುದಲ್ಲ. ಎಲ್ಲವನ್ನ ಮರೆತು ಮುಂದುವರಿಯಬೇಕು ಎಂದು ಎಚ್‍ಡಿಡಿ ಹೇಳಿದ್ದಾರೆ. ಇದಕ್ಕೆ ನಾನೇನು ಸೋತ ಬೇಸರದಲ್ಲಿಲ್ಲ. ಆದರೆ ನಿಮಗೆ ಹಾಗೂ ಅಪ್ಪನಿಗೆ ಅಷ್ಟೊಂದು ಪ್ರೀತಿ ತೋರಿಸುವ ಮಂಡ್ಯ ಜನ ನನ್ನನ್ನ ಕೈ ಬಿಟ್ಟಿದ್ದು ನನಗೆ ಬೇಜಾರಾಯಿತು ಅಷ್ಟೇ ಎಂದಿದ್ದಾರೆ.

ರಾಜಕಾರಣದಲ್ಲಿ ನಮ್ಮಗುರಿ ಸ್ಪಷ್ಟವಾಗಿರಬೇಕು. ಎಷ್ಟೇ ಕಷ್ಟ ಆದರೂ ಗುರಿ ಮುಟ್ಟುವ ಛಲ ಇರಬೇಕು. ನೀನು ಮಂಡ್ಯದಲ್ಲೇ ರಾಜಕಾರಣ ಮಾಡೋದಾದ್ರೆ ಸ್ಪಷ್ಟವಾದ ತೀರ್ಮಾನ ಮಾಡಿ ಮುಂದುವರಿ. ಮುಂದೆ ಹೋದ ಮೇಲೆ ಹಿಂದೆ ಬರೋ ಹಾಗಿರಬಾರದು ಎಂದು ಎಚ್‍ಡಿಡಿ ಮಾತಿಗೆ ನಿಖಿಲ್, ಇಲ್ಲ ತಾತಾ ಇಷ್ಟು ಮುಂದೆ ಹೋದ ಮೇಲೆ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ಎಲ್ಲಿ ಸೋತಿದ್ದೀನಿ ಅಲ್ಲೇ ಗೆಲ್ಲಬೇಕು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.ಯಾರ ವಿರುದ್ಧ ಮಾತನಾಡಬೇಡ. ನಿನ್ನ ಪಾಡಿಗೆ ನೀನು ಕೈಲಾದ ಕೆಲಸ ಮಾಡಿಕೊಂಡು ಹೋಗು. ಜನ ಅವರಾಗಿಯೇ ನಿನ್ನ ಇಷ್ಟ ಪಡಬೇಕು. ಸೋಲಿಸಿದರೂ ನಮ್ಮ ಜೊತೆಗಿದ್ದು ಕಷ್ಟ ಸುಖಕ್ಕೆ ಸ್ಪಂದಿಸಿದ ಅನ್ನಬೇಕು. ಹಾಗೆ ಕೆಲಸ ಮಾಡಬೇಕು ಅದಕ್ಕೆ ಬದ್ಧತೆ ಇರಬೇಕು ಎಂದಿದ್ದಾರೆ. ಇದಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲ್ಲ. ಮಂಡ್ಯದಲ್ಲೇ ಇದ್ದು ಕೆಲಸ ಮಾಡುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದಾರೆ.

ಇನ್ನೊಂದು ವಿಷಯ ತಿಳ್ಕೋ ನೀನು ಮಂಡ್ಯದಲ್ಲಿ ಓಡಾಡೋದು ನಾಳೆ ಇನ್ಯಾರೋ ರಾಮನಗರ, ಮಾಗಡಿ ಅಲ್ಲಿ ನಿಂತ್ರೆ ಸುಲಭವಾಗಿ ಗೆಲ್ಲಬಹುದು ಅಂದ್ರೆ ಅವಾಗ ಇನ್ನೊಂದು ತರ ಯೋಚನೆ ಮಾಡೋ ಹಾಗೆ ಮಾಡ್ಕೋಬೇಡ ಎಂದು ಹೇಳಿದ್ದಕ್ಕೆ ನಿಖಿಲ್, ಖಂಡಿತಾ ಇಲ್ಲ ತಾತಾ ನಾನು ಬೇರೆ ಯೋಚನೆ ಮಾಡಲ್ಲ. ನನಗೆ ನನ್ನ ಸೋಲಿಗಿಂತ ನಿಮ್ಮ ಸೋಲು ಜಾಸ್ತಿ ನೋವಾಯ್ತು ಎಂದು ತಿಳಿಸಿದ್ದಾರೆ.

ಸೋಲಿಗೆ ಎದೆಗುಂದಬೇಡ. ಯಾರಿಗೂ ಬೈಬೇಡ, ಗುರಿ ಸ್ಪಷ್ಟವಾಗಿರಲಿ ರಾಜಕೀಯವಾಗಿ ಮುಂದುವರಿ ಎಂದು ಪಾಠ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ರಾಜಕೀಯ ಚಾಣಕ್ಯ ದೇವೇಗೌಡರ ಹಿತ ನುಡಿ, ಗುರುಬೋಧನೆಗೆ ನಿಖಿಲ್ ರಿಂದ ಯಾವ ರೀತಿಯ ರಾಜಕೀಯ ನಡೆಗೆ ಕಾರಣವಾಗಬಹುದು ಎಂಬ ಕುತೂಹಲವನ್ನು ಈಗ ಹುಟ್ಟು ಹಾಕಿದೆ.