ರಾಜಕೀಯ

ಮಂಡ್ಯದಲ್ಲಿ ಸುಮಲತಾಗೆ ಭಾರಿ ಮುನ್ನಡೆ, ನಿಖಿಲ್‌ಗೆ ಹಿನ್ನಡೆ

By admin

May 23, 2019

ಮಂಡ್ಯ, ಮೇ 22: ತೀವ್ರ ಜಿದ್ದಾಜಿದ್ದಿನ ಕದನ ನಡೆಯುತ್ತಿರುವ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಡುವಿನ ಪೈಪೋಟಿ ಕುತೂಹಲ ಕೆರಳಿಸಿದೆ.

ಒಂದು ಸುತ್ತಿನ ಎಣಿಕೆಯಲ್ಲಿ ನಿಖಿಲ್ ಮುನ್ನಡೆ ಪಡೆದುಕೊಂಡರೆ ಸುಮಲತಾ ಮತ್ತೊಂದು ಸುತ್ತಿನಲ್ಲಿ ಬಲ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಸ್ತುತ ಸುಮಲತಾ 40 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಇನ್ನೂ 12 ಸುತ್ತಿನ ಮತ ಎಣಿಕೆ ಬಾಕಿ ಇರುವುದರಿಂದ, ಸಂಪೂರ್ಣ ಚಿತ್ರಣವೇ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಆರಂಭದ ಸುತ್ತುಗಳಲ್ಲಿ ಸುಮಲತಾ ಮುನ್ನಡೆ ಪಡೆದರೂ, ಬಳಿಕ ನಿಖಿಲ್ ಮುನ್ನಡೆ ಸಾಧಿಸಿದ್ದರು. ಈ ರೀತಿ ಫಲಿತಾಂಶ ಬದಲಾಗುತ್ತಿರುವುದು ಎರಡೂ ಅಭ್ಯರ್ಥಿಗಳ ಬೆಂಬಲಿಗರನ್ನು ಗೊಂದಲಕ್ಕೆ ದೂಡುತ್ತಿದೆ.

ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ಜೆಡಿಎಸ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದರು. ಆದರೆ, ಕೆಲ ಹೊತ್ತಿನಲ್ಲಿಯೇ ಸುಮಲತಾ ಮೇಲುಗೈ ಸಾಧಿಸಿದರು. ದೇಶದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಲ್ಲಿ ಇಷ್ಟು ನಿಕಟ ಪೈಪೋಟಿ ನಡೆಯುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.