ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್ ಟ್ರೇಡಿಂಗ್, ನ್ಯೂಟ್ರೀ ಮರ್ಸಾಂಟೈಲ್, ಸರ್ವೇಶ್ವರ ಟ್ರೇಡಿಂಗ್ ಮೊದಲಾದ ಕಂಪನಿಗಳು ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿವೆ.
2016ರಲ್ಲಿ ಪ್ರಕರಣವೊಂದರ ಸಂಬಂಧ ಈ 32 ಕಂಪನಿಗಳು ಷೇರು ಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ತಲಾ 5 ಲಕ್ಷ ದಂಡಕಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಮೂರು ವರ್ಷಗಳಾದರೂ ಕಂಪನಿಗಳಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ SEBI 2017ರಲ್ಲಿ ನ್ಯಾಯಾಂಗ ನಿಂದನೆಪ್ರಕರಣ ದಾಖಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ಸರ್ವೋಚ್ಚ ನ್ಯಾಯಪೀಠ ಈಗ ಈ ಕಂಪನಿಗಳ ಅಧಿಕಾರಿಗಳಿಗೆ ನಾನ್ ಬೇಲಬಲ್ ವಾರೆಂಟ್ ಹೊರಡಿಸಿದೆ.
ಬ್ಯಾಂಕ್ ಆಫ್ ರಾಜಸ್ಥಾನ್ ಸಂಸ್ಥೆಯ ಮಾಜಿ ಪ್ರೊಮೋಟರ್ಸ್ ಆದ ಟಯಾಲ್ ಕುಟುಂಬ ಮತ್ತಿತರ ಸಂಸ್ಥೆಗಳು ವಂಚನೆ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ SEBI ಮಂಡಳಿಯು2013ರಲ್ಲಿ ಪ್ರವೀಣ್ ಟಯಾಲ್, ಅವರಕುಟುಂಬ ಸದಸ್ಯರಾದ ಸಂಯಜ್ ಟಯಾಲ್, ನವೀನ್ಟಯಾಲ್, ಸೌರಭ್ ಟಯಾಲ್ ಸೇರಿದಂತೆ ಈ ವಂಚನೆಯಲ್ಲಿ ಷಾಮೀಲಾದಹಲವು ಸಂಸ್ಥೆಗಳಿಗೆ ತಲಾ 5 ಲಕ್ಷ ರೂದಂಡ ಕಟ್ಟುವಂತೆ ಆದೇಶಿಸಿತು.
ಸುಪ್ರೀಂ ಕೋರ್ಟ್ 2016ರಲ್ಲಿ ಈ ಆದೇಶವನ್ನುಎತ್ತಿ ಹಿಡಿದು ತೀರ್ಪು ನೀಡಿತು.ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಹಲವು ಕಂಪನಿಗಳು ದಂಡ ಕಟ್ಟಲು ಆಸಕ್ತಿ ತೋರಲಿಲ್ಲ. ಕೋರ್ಟ್ ನೋಟೀಸ್ ಅನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗಲೂ 32 ಕಂಪನಿಗಳು 5 ಲಕ್ಷ ರೂ ದಂಡವನ್ನು ಕಟ್ಟಲು ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತು.ಈಗ ಜಾಮೀನು ರಹಿತ ವಾರೆಂಟ್ ಹೊರಡಿಸಿಲಾಗಿದೆ.