ಭಟ್ಕಳ: ಪಾಲಕರಾದವರು ತಮ್ಮ ಮಕ್ಕಳಿಗೆ ಶಿಕ್ಷಣ ಒಂದರಲ್ಲಿಯೇ ಒತ್ತಡ ಹಾಕದೆ ಕ್ರೀಡೆ, ಸಾಂಸ್ಕೃತಿ ಹಾಗು ಎಲ್ಲಾ ರಂಗದಲ್ಲಿಯೂ ಕೂಡ ಹೆಚ್ಚು ಪ್ರೋತ್ಸಾಹ ನೀಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುವಂತೆ ಮಾಡಬೇಕು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಅವರು ಗುರುವಾರದಂದು ಸರಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ಸರಕಾರಿ ಪ್ರೌಢಶಾಲೆ ಸೋನಾರಕೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡುತ್ತಿರುವ ಉದ್ದೇಶ ಯಾಕೆಂದು ವಿದ್ಯಾರ್ಥಿಗಳು ಮೊದಲು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಹೆಚ್ಚಿಸಲು ಮತ್ತು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಬೇಕೆಂಬ ಉದ್ದೇಶದಿಂದ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿ ತಲುಪಿಕೊಂಡು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂದು ಸರ್ಕಾರ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿಕೊಂಡು ಬರುತ್ತಿದ್ದೆ. ಅದರ ಸರಿಯಾದ ಉಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಸರ್ಕಾರ ನಿಮಗೆ ಉಚಿತವಾಗಿ ಸೈಕಲ್ ನೀಡುತ್ತಿದೆ ಎಂದು ತಿಳಿದುಕೊಳ್ಳ ಬೇಡಿ, ಅದು ನಿಮ್ಮ ಹಣ ಸಾರ್ವಜನಿಕರ ಹಣ ನಿಮ್ಮ ಹಣದಲ್ಲಿಯೇ ನಿಮಗೆ ಸೈಕಲ್ ನೀಡುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಉಚಿತ ಸೈಕಲ್ ವಿತರಣೆಯಾದ ನಂತರ ಅದು ಹೆಚ್ಚಾಗಿ ದುರುಪಯೋಗವಾಗುತ್ತಿದೆ ವಿದ್ಯಾರ್ಥಿಗಳ ಹತ್ತಿರ ಇರದೇ ಬೇರೆ ವ್ಯಕ್ತಿಗಳು ಅದರ ಉಪಯೋಗ ಪಡೆಯುತ್ತಿರುತ್ತಾರೆ ಎಂದು ಹೇಳಿದರು
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಪಂಚಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರುವ ಉದ್ದೇಶಕ್ಕಾಗಿ ನೀಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಇದರ ದುರುಪಯೋಗ ಪಡೆದುಕೊಳ್ಳದೆ ಶಾಲೆಗಳಿಗೆ ಮಾತ್ರ ಸೈಕಲ್ ತೆಗೆದುಕೊಂಡು ಹೋಗುವಂತೆ ಪಾಲಕರು ಸರಿಯಾಗಿ ಗಮನವಹಿಸಬೇಕು ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಾಲಕರು ಕೂಡ ಮಕ್ಕಳು ಶಾಲೆಯಿಂದ ಮನೆಗೆ ಬಂದ ಮೇಲೆ ಅವರ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕೆಂದು ಹೇಳಿದರು
ನಂತರ ಬಸ್ ಪಾಸ್ ಮತ್ತು ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ 20 ಬಾಲಕರಿಗೆ ಹಾಗೂ 26 ಬಾಲಕಿಯರಿಗೆ ಸೈಕಲಗಳನ್ನು ವಿತರಿಸಿದರು .ಇದಕ್ಕೂ ಪೂರ್ವದಲ್ಲಿ ಪ್ರೌಢಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಮರುನಿರ್ಮಾಣ ಶೀರ್ಷಿಕೆಯಡಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋನಾರಕೇರಿ ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಮತ್ತು ಕೃಷಿ ಇಲಾಖೆಯಲ್ಲಿ ರೈತ ಫಲಾನುಭವಿಗಳಿಗೆ ಕೃಷಿಗೆ ಸಂಬಂಧ ಪಟ್ಟ ಸಲಕರಣೆ ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಘಟಕದ ಅಧ್ಯಕ ರಾಜೇಶ ನಾಯ್ಕ, ಜಿಲ್ಲಾ ಪಂಚಾಯತ ಸದಸ್ಯೆ ಸಿಂಧು ಭಾಸ್ಕರ್ ನಾಯ್ಕ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ರಾಘವೇಂದ್ರ ಶೇಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಮುಂತಾದವರು ಉಪಸ್ಥಿತರಿದ್ದರು.