ಬೆಂಗಳೂರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಗಳಿಗೆಯೇ ರೈತರು, ಮೀನುಗಾರರು ಮತ್ತು ನೇಕಾರರಿಗೆ ಸಿಹಿಸುದ್ದಿ ನೀಡಿದ್ದ ಸಿಎಂ ಯಡಿಯೂರಪ್ಪ ವಿದ್ಯಾರ್ಥಿಗಳಿಗೂ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್‍ಗಳಿದ್ದು, 1,88,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ. ಇದೀಗ ಸರ್ಕಾರ ಇದನ್ನು 2200ರಿಂದ 2500ರವರೆಗೆ ಏರಿಕೆ ಮಾಡಲು ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಯಡಿಯೂರಪ್ಪನವರು ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ವೆಚ್ಚ ಏರಿಕೆ ಮಾಡುವ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ ವರ್ಗ , ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಿಲಯಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಈ ಹಿಂದೆ ಬಿಜೆಪಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಶೌಚಾಲಯ, ವಿದ್ಯಾರ್ಥಿಗಳ ಕೊಠಡಿ, ಹಾಸಿಗೆ, ದಿಂಬು,ಊಟದ ತಟ್ಟೆ, ಅಡುಗೆ ಮನೆ ಸೇರಿದಂತೆ ವಿದ್ಯಾರ್ಥಿ ನಿಲಯಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಜೊತೆಗೆ ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ ನೀಡುತ್ತಿರುವ ಹಣ ಯಾವುದಕ್ಕೂ ಸಾಲದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ವಾರ್ಷಿಕ ವೆಚ್ಚವನ್ನು ಏರಿಕೆ ಮಾಡುವುದು ಹಾಗೂ ವಿದ್ಯಾರ್ಥಿ ನಿಲಯಗಳ ಉನ್ನತೀಕರಣಕ್ಕೂ ಗಮನಹರಿಸಿದೆ. 2018-19ರ ಅವಧಿಯಲ್ಲಿ 250 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ 1,88,500 ವಿದ್ಯಾರ್ಥಿಗಳಿಗೆ ಹೊಂದಾಣಿಕೆ ಮಾಡುವುದೇ ಅಧಿಕಾರಿಗಳಿಗೆ ಸಮಸ್ಯೆಯಾಗಿತ್ತು.
ಕನಿಷ್ಟ ಪಕ್ಷ ಇನ್ನು 250 ಕೋಟಿ ಅನುದಾನ ನೀಡಬೇಕೆಂದು ಇಲಾಖೆ ಅಧಿಕಾರಿಗಳೇ ಮನವಿ ಮಾಡಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರುವುದರಿಂದ ಹಾಸ್ಟೆಲ್‍ಗಳ ಉನ್ನತೀಕರಣ, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು, ಸುರಕ್ಷತೆ, ಹಾಸ್ಟೆಲ್‍ಗಳಲ್ಲಿ ಅನಗತ್ಯವಾಗಿ ಬೀಡುಬಿಟ್ಟಿರುವ ವಿದ್ಯಾರ್ಥಿಗಳಲ್ಲದವರನ್ನು ಖಾಲಿ ಮಾಡಿಸುವುದು, ವಿದ್ಯಾರ್ಥಿನಿಯರಿಗೆ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಶೀಘ್ರ ಆದೇಶವನ್ನು ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ. ವೆಚ್ಚ ಹೆಚ್ಚಳ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ವೆಚ್ಚವಾಗಬಹುದು. ಆದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದನ್ನು ತುರ್ತಾಗಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ.