ಸಾರ್ವಜನಿಕ ಸ್ಥಳದಲ್ಲಿ ಯುವಕ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಅಂಕಿತ್ ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ದೆಹಲಿಯ ತಿಲಕ್ ನಗರದಲ್ಲಿ ಈ ಘಟನೆ ಶನಿವಾರ ನಡೆದಿದ್ದು, ಮೃತ ಅಂಕಿತ್ ರಿಪೇರಿಗೆ ನೀಡಿದ್ದ ಮೊಬೈಲ್ ತೆಗೆದುಕೊಂಡು ಬರುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲಿದ್ದ ರವಿ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರವಿ ಹಾಗೂ ಆತನ ಸ್ನೇಹಿತರು ಸೇರಿ ಎಲ್ಲರ ಮುಂದೆ ಅಂಕಿತ್‌ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ.
ಅಂಕಿತ್ ತಡರಾತ್ರಿಯಾದರೂ ಮನೆಗೆ ವಾಪಸಾಗದಿರುವುದನ್ನ ಗಮನಿಸಿದ ಅಂಕಿತ್ ಸಹೋದರ ಹುಡುಕಿಕೊಂಡು ಬಂದಾಗ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ರವಿಯನ್ನು ಬಂಧಿಸಿದ್ದು, ಆತನ ಸ್ನೇಹಿತರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.