ಈ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕ್ಕೆ ನಿಮಗೆ ಆಗಲ್ಲ ಎಂದ್ರೆ ಇಲ್ಲಿಂದ ತೊಲಗಿ ಎಂದು ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ವೇಳೆಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಹಾಗೂ ವಾಸ್ತವ್ಯ ಹೂಡಲು ಭೇಟಿ ನೀಡಿದ ಆರೋಗ್ಯ ಮಂತ್ರಿ ಶ್ರೀರಾಮುಲುರವರು, ಆಸ್ಪತ್ರೆಯ ಒಳಗೆ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಇದ್ದಂತಹ ರೋಗಿಗಳನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿದರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಂತಹ ಪರಿಸ್ಥಿತಿಗೂ ನಾನು ಬಗ್ಗುವುದಿಲ್ಲ. ಸರ್ಕಾರಿ ವೈದ್ಯರು ಎರಡು ಬೋಟ್‌ಗಳ ಮೇಲೆ ಕಾಲು ಇಡಬಾರದು.
ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿ ಮುಗಿಸಿ ಹೊರ ಬರುತ್ತಿದ್ದು, ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರಿ ವೈದ್ಯರು ಎರಡೂ ಕಡೆ ಕೆಲಸ ಮಾಡುವುದೇ ಆದ್ರೆ ಮೊದಲು ಇಲ್ಲಿಂದ ತೊಲಗಿ ಎಂದು ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ರು.
ಇನ್ನು ವೈದ್ಯರು ಕರ್ತವ್ಯಕ್ಕೆ ಸೇರುವಾಗ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪ್ರಮಾಣ ಮಾಡಿರುತ್ತೀರ. ಅದರಂತೆ ನೀವು ನಡೆದುಕೊಳ್ಳಬೇಕು. ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ರೆ ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ಸಿಬ್ಬಂದಿ ನೇಮಿಸುತ್ತೇವೆ ಎಂದರು.