ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು.
ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕಾರ್ ಪಾರ್ಕಿಂಗ್ ಗೇಟ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಕಾರ್ ಮಾಲಿಕರು ತಮ್ಮ ತಮ್ಮ ಕಾರ್ ಬಳಿ ಓಡಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರನ್ನು ಕಾರ್ ಬಳಿ ಬಿಟುತ್ತಿಲ್ಲವಾದ್ದರಿಂದ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದವೂ ಏರ್ಪಟ್ಟಿದೆ..
ಮೊದಲನೇ ಹಂತದ ವಿಮಾನ ಹಾರಾಟ ಮುಕ್ತಾಯಗೊಂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹುಲ್ಲಿಗೆ ಕೆಲ ಕಿಡಿಗೇಡಿಗಳು ಸಿಗರೇಟ್ ಹಾಕಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಲಹಂಕದ ಮೈದಾನದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದು, ಈಗಾಗಲೇ ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.