ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ.
ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದನ್ನು ತಡೆಯುವ ನಿಟ್ಟಿನಲ್ಲಿ ಎಮಿರೇಟ್ಸ್ ಗ್ರೂಪ್ ಅಭಿಯಾನವನ್ನು ಕೈಗೊಂಡಿತ್ತು. ಅದರಲ್ಲಿ ಬರೋಬ್ಬರಿ 73,393 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಈ ಅಭಿಯಾನದಲ್ಲಿ ಕಾರ್ಪೋರೇಷನ್‍ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅಥವಾ ಕುಟುಂಬದವರು ಎಂದು ಭಾಗ ಮಾಡಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು.
ಈ ಅಭಿಯಾನದಲ್ಲಿ ಕಾಗದದ ಹೊರತಾಗಿಯೂ ಪ್ಲಾಸ್ಟಿಕ್, ಗಾಜು, ಡಬ್ಬಿಗಳು ಮತ್ತು ಮೊಬೈಲ್ ಫೋನ್‍ಗಳು ಸಂಗ್ರಹಿಸಲಾಗಿದೆ. ಅನೇಕ ಜನರು ಈ ಅಭಿಯಾನದಲ್ಲಿ ಭಾಗವಹಿಸಿ ತ್ಯಾಜ್ಯ ಪೇಪರ್‌ಗಳನ್ನು ಸಂಗ್ರಹಿಸಿದ್ದರು. ಆದರೆ 8 ವರ್ಷದ ಟೋನಿ 14,914 ಕೆಜಿ ತ್ಯಾಜ್ಯ ಸಂಗ್ರಹಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದಳು. ಪ್ರತಿವಾರ ಕಾಗದಗಳನ್ನು ಸಂಗ್ರಹಿಸಲು ನಾನು ನಮ್ಮ ಪ್ರದೇಶದ ಸುತ್ತಮುತ್ತ ಅಭಿಯಾನ ನಡೆಸುತ್ತಿದ್ದೆ. ಪ್ರತಿಯೊಬ್ಬರ ಮನೆಗೆ ಹೋಗಿ ಕಾಗದ ತ್ಯಾಜ್ಯ, ಓದಿ ಮುಗಿದ ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳನ್ನು ಸಂಗ್ರಹಿಸಿ ತರುತ್ತಿದ್ದೆ ಎಂದು ಟೋನಿ ಹೇಳಿದ್ದಾಳೆ.
ಯಾರೂ ಕೂಡ ಬಳಸಿದ ಪೇಪರ್‌ಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಇಟ್ಟಪಡುವುದಿಲ್ಲ. ಅದರಲ್ಲೂ ಮರುಬಳಕೆ ಮಾಡುವಂತಹ ತ್ಯಾಜ್ಯವನ್ನು ಸಂಗ್ರಹಿಸಬೇಕು. ನನ್ನಂತೆಯೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕು. ಆಗ ಮುಂದಿನ ದಿನದಲ್ಲಿ ನಾವು ಪರಿಸರ ಮಧ್ಯೆ ವಾಸಿಸಬಹುದು ಎಂದು ತಿಳಿಸಿದ್ದಾಳೆ.