ಸಿನಿಮಾ

ವಿಶ್ವಾದ್ಯಂತ 3 ಸಾವಿರ ಥಿಯೇಟರ್‌ಗಳಲ್ಲಿ ಪೈಲ್ವಾನ್ ಹವಾ-ಚಿತ್ರಮಂದಿರದ ಎದುರು 101 ತೆಂಗಿನಕಾಯಿ ಒಡೆದ ಅಭಿಮಾನಿ…!

By admin

September 12, 2019

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ.

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ.

ಸುದೀಪ್ ಅವರ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅಲ್ಲದೆ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಪೈಲ್ವಾನ್ ತನ್ನ ತಾಕತ್ತನ್ನು ಪ್ರದರ್ಶಿಸುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಪೈಲ್ವಾನ್ ಚಿತ್ರವನ್ನು ಎಸ್. ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.