ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಎರಡನೂರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದ ಮಜಾಟಾಕೀಸ್ ಇದೀಗ ಅಂತಿಮ ಘಟಕ್ಕೆ ಬಂದು ತಲುಪಿದೆ. ಅಂದ್ರೆ ಈ ಶೋ ಮುಕ್ತಾಯವಾಗ್ತಿದೆ.ಅಪರ್ಣಾ, ಮನೋಹರ್ ಹಾಗೂ ಇಂದ್ರಜಿತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ.
ಶ್ವೇತಾ, ದಯಾನಂದ್, ಪವನ್, ವಂದನ ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್.
2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ.
ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಪುನೀತ್, ಉಪೇಂದ್ರ, ಸುದೀಪ್, ದರ್ಶನ್, ಅರ್ಜುನ್ ಸರ್ಜಾ ಹಾಗೂ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು.
ಇನ್ನು ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ ಕುರಿತಂತೆ ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದ್ದು ಆ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ.
ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಮಜಾ ಟಾಕೀಸ್ ಶೋ ಮುಕ್ತಾಯದ ವಿಷಯ ಅಭಿಮಾನಿಗಳಲ್ಲಿ ಅಸಮಾಧಾನವನ್ನುಂಟು ಮಾಡಿದ್ದು ಕಲರ್ ಸೂಪರ್ಸ್‌ನ ಫೇಸ್ ಬುಕ್‌ನಲ್ಲಿ ಈ ಶೋ ಮುಂದುವರೆಸಿ ಎನ್ನುವ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.