ನಗರದ ಪ್ರವಾಸಿ ಮಂದಿರದ ಮುಂಭಾಗ ಅಖಂಡ ಭಾರತ ವಿನಾಯಕ ಮಹಾಸಭಾ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.
ಬೃಹತ್ ವೇದಿಕೆಯಲ್ಲಿ ವೆಂಕಟರಮಣಸ್ವಾಮಿ ರೂಪಿ ಸಿದ್ಧಿ-ಬುದ್ಧಿ ಸಮೇತ ಗಣಪನ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಮಹಾಸಭಾ ಒಂದು ವಾರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.
ಭಾನುವಾರ ಮಧ್ಯಾಹ್ನ ಬೃಹತ್ ಕೇಸರಿ ಧ್ವಜ ಹಾರಾಡಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.ಕೇರಳದ ಚಂಡೆ ವಾದನ, ಷಣ್ಮುಖ, ಉಗ್ರನರಸಿಂಹ, ಕಾಳಿ, ವಿಷ್ಣು, ಈಶ್ವರ, ಶ್ರೀಕೃಷ್ಣ, ತಿರುಪತಿ ತಿರುಮಲ ವೆಂಕಟೇಶ್ವರ ಸೇರಿ ಶಕ್ತಿ ದೇವತೆಗಳ ಪಟ ಪ್ರದರ್ಶನ ಮೆರವಣಿಗೆಯ ಆಕರ್ಷಣೆಯಾಗಿತ್ತು. ಗಾರುಡಿ ಬೊಂಬೆ ಇನ್ನಿತರ ಜಾನಪದ ಕಲಾ ತಂಡಗಳು ರಸ್ತೆಯುದ್ದಕ್ಕೂ ನೀಡಿದ ಪ್ರದರ್ಶನವನ್ನು ಜನತೆ ಕಣ್ತುಂಬಿಕೊಂಡರು.
ಕೋಲಾರಮ್ಮಕೆರೆಯಲ್ಲಿವಿಸರ್ಜನೆ: ಛತ್ರಪತಿ ಶಿವಾಜಿ ವೇಷಧಾರಿ ಕುದುರೆ ಮೇಲೇರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರನ್ನು ಆಕರ್ಷಿಸಿದರೆ, ಯುವಕರು ಗುಂಪು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿದ ನಂತರ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಿರುವ ಸಾಮೂಹಿಕ ಗಣೇಶ ವಿಸರ್ಜನಾ ಹೊಂಡದಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ನಗರಸಭಾ ಮಾಜಿ ಸದಸ್ಯರಾದ ಸೋಮಶೇಖರ್, ಮಂಜುನಾಥ್, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ಮುನಿವೆಂಕಟಯಾದವ್, ಡಾ.ಶಿವಣ್ಣ ಇತರರು ಹಾಜರಿದ್ದರು.
ಬರಪೀಡಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಬೇಡಿಕೆ ಮುಂದಿಟ್ಟುಕೊಂಡು ನಗರದಲ್ಲಿ 6ವರ್ಷಗಳಿಂದ ಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವವನ್ನು ಶಾಂತಿಯಿಂದ ಆಚರಿಸುತ್ತಿದೆ. ಜಿಲ್ಲೆಗೆ ನೀರಾವರಿ ಯೋಜನೆಗಳು ಮಂಜೂರಾಗಬೇಕು, ಅದು ಯರಗೋಳ್, ಎತ್ತಿನಹೊಳೆ, ಪರಮಶಿವಯ್ಯ ವರದಿ ಅಧಾರಿತ ಹೀಗೆ ಯಾವುದೇ ಮೂಲದಿಂದ ಆದರೂ ಶಾಶ್ವತ ನೀರಾವರಿ ಸೌಲಭ್ಯವನ್ನು ಸರ್ಕಾರ ಆದಷ್ಟು ಬೇಗ ಒದಗಿಸಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ ಒತ್ತಾಯಿಸಿದರು.
ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗುವವರೆಗೂ ಗಣೇಶೋತ್ಸವ ಮುಂದುವರೆಯಲಿ. ಯುವಕರ ಒಗ್ಗಟ್ಟು ಪ್ರದರ್ಶನದ ಜತೆಗೆ ಶಾಂತಿ ಸೌಹಾರ್ದತೆ ಕಾಪಾಡುವ ರೀತಿಯಲ್ಲಿ ಮೆರವಣಿಗೆ ನಡೆಯಲಿ.