ಇಷ್ಟು ದಿನ ಮಳೆಯ ಅಭಾವದಿಂದ ಸೋರಗಿ ಹೋಗಿದ್ದ ಮಲೆನಾಡಿನ ನದಿಗಳಿಗೆ ಜೀವಕಳೆ ಬಂದಿದೆ. ಪಶ್ಚಿಮಘಟ್ಟ ಸಾಲಿನ ಆರಿದ್ರಾ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 4-5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.. ಶೃಂಗೇರಿಯ ಕಪ್ಪೆ ಶಂಕರ ದೇಗುಲ ಮುಳುಗಡೆಯಾಗಿದೆ.. ಕುದುರೆಮುಖ,
ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಸಂಪರ್ಕಿಸುವ ಹೆಬ್ಬಾಳ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ. ಕೆಲವೆಡೆ ಘಟ್ಟ ಪ್ರದೇಶಗಳಲ್ಲಿ ರಸ್ತೆಗಳೂ ಕೊಚ್ಚಿಹೋಗಿವೆಕೇವಲ ಚಿಕ್ಕಮಗಳೂರಷ್ಟೇ ಅಲ್ಲ, ಕೊಡಗು ಜಿಲ್ಲೆಯಲ್ಲೂ ಕಳೆದ ಮೂರು ದಿನಗಳಿಂದ ಮುಂಗಾರು ಬಿರುಸುಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಇದರ ಜೊತೆ ಎನ್‌ಡಿಆರ್‌ಎಫ್ ತಂಡ ಕೂಡ ಅಪಾಯಕಾರಿ ಸ್ಥಳಗಳ ಮೇಲೆ ನಿಗಾ ಇಟ್ಟಿದೆ.
ಇನ್ನು ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಅದರ ಎಫೆಕ್ಟ್ ರಾಜ್ಯದ ಗಡಿ ಗ್ರಾಮಗಳಿಗೂ ತಟ್ಟಿದೆ. ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧ್‌ಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ 6 ಸೇತುವೆಗಳು ಜಲಾವೃತಗೊಂಡಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸವಾರರು ಪರದಾಡುವಂತಾಗಿದೆ.
ರಾಣೆಬೆನ್ನೂರು ತಾಲೂಕಿನ ಹೊಳೆಆನ್ವೇರಿ ಗ್ರಾಮದ ಬಳಿ ನಡುಗಡ್ಡೆಯಲ್ಲಿ 7 ಕುದುರೆಗಳು ಸಿಲುಕಿವೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ನಡುಗಡ್ಡೆಯಲ್ಲಿ ಸಿಲುಕಿಗೆ ಮೂಖ ಪ್ರಾಣಿಗಳು ಪರದಾಡುತ್ತಿದೆ. ಕಳೆದ 3 ದಿನಗಳಿಂದ ಆಹಾರವಿಲ್ಲದೆ ಕುದುರೆಗಳು ಕಂಗಾಲಾಗಿದ್ದು, ಮೂಖ ಪ್ರಾಣಿಗಳನ್ನು ರಕ್ಷಿಸುವಂತೆ ಸ್ಥಳೀಯರು ಅರಣ್ಯಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.